ರಾಜ್ಯಪಾಲರ ಆಳ್ವಿಕೆ ಜಾರಿಗೆ ಡಿಕೆಶಿ ಒತ್ತಾಯ

ಬೆಂಗಳೂರು, ಮೇ ೪-ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ರಾಜ್ಯದಲ್ಲಿ ಸರ್ಕಾರ ಸತ್ತಿದೆ. ರಾಜ್ಯಪಾಲರ ಆಳ್ವಿಕೆ ಜಾರಿ ಮಾಡುವುದೇ ಸೂಕ್ತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಆರೋಗ್ಯ ಸಚಿವರು ಮಾತ್ರವಲ್ಲ ಎಲ್ಲ ಮುಖ್ಯಮಂತ್ರಿ ಸೇರಿದಂತೆ ಎಲ್ಲ ೩೩ ಸಚಿವರು ರಾಜೀನಾಮೆ ನೀಡಲಿ. ಈ ಸರ್ಕಾರ ಅಧಿಕಾರದಿಂದ ಕೆಳಗಿಳಿದು ರಾಜ್ಯಪಾಲರ ಆಳ್ವಿಕೆ ಬಂದರೆ ಜನರಿಗೆ ಒಳ್ಳೆಯದಾಗಬಹುದು ಎಂದು ಹೇಳಿದರು.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ನಡೆದ ದುರಂತದ ಹಿನ್ನೆಲೆಯಲ್ಲಿ ಚಾಮರಾಜನಗರಕ್ಕೆ ತೆರಳುವ ಮುನ್ನ ನಗರದಲ್ಲಿಂದು ಸುದ್ದಿಗಾರರೊದಿಗೆ ಮಾತನಾಡಿದ ಅವರು, ಯಾವ ಸಚಿವರುಗಳೂ ಕೆಲಸ ಮಾಡುತ್ತಿಲ್ಲ. ಜಿಲ್ಲೆಗಳಲ್ಲಿ ಮೊಕ್ಕಾಂ ಹೂಡಿ ಸಚಿವರುಗಳು ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಚಾಮರಾಜನಗರದಲ್ಲೂ ನಿನ್ನೆ ದುರಂತ ನಡೆದ ನಂತರ ಜಿಲ್ಲೆಗೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಅರ್ಧ ಗಂಟೆ ಮಾತ್ರ ಜಿಲ್ಲೆಯಲ್ಲಿದ್ದರು. ಸುರೇಶ್ ಕುಮಾರ್ ಡಿಪ್ಲೋಮ್ಯಾಟ್ ಬುದ್ಧಿವಂತನಿರಬಹುದು. ಈ ರೀತಿ ಬೇಜಾವಾಬ್ದಾರಿಯಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದರು.
ಸಚಿವ ಸುರೇಶ್‌ಕುಮಾರ್ ಚಾಮರಾಜನಗರಕ್ಕೆ ನಿನ್ನೆ ಭೇಟಿ ನೀಡಿದ ನಂತರ ಅಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ ರೋಗಿಗಳ ಕುಟುಂಬದವರ ಜತೆ ಮಾತನಾಡಲಿಲ್ಲ. ಅವರಿಗೆ ಸಾಂತ್ವಾನ ಹೇಳಲಿಲ್ಲ. ಅರ್ಧ ಗಂಟೆ ಇದ್ದು, ಸಭೆ ನಡೆಸಿ ಬಂದು ಬಿಟ್ಟರೆ ಎಲ್ಲವೂ ಸರಿ ಹೋಗುತ್ತದಾ, ಇಂತಹ ಸಚಿವರಿದ್ದರೆ ಪರಿಸ್ಥಿತಿ ಇನ್ನೆನಾಗುತ್ತದೆ ಎಂದರು.
ಚಾಮರಾಜನಗರ ದುರಂತಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವರು ಮಾತ್ರವಲ್ಲ ಎಲ್ಲ ಸಚಿವರು ರಾಜೀನಾಮೆ ಕೊಟ್ಟು ಈ ಸರ್ಕಾರವೇ ತೊಲಗಬೇಕು. ರಾಜ್ಯಪಾಲರ ಆಳ್ವಿಕೆಯೇ ಬರಲಿ. ಆಗಲಾದರೂ ಪರಿಸ್ಥಿತಿ ಸರಿ ಹೋಗಬಹುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಚಾಮರಾಜನಗರ ಜಿಲ್ಲೆ ಮಾತ್ರ ಅಲ್ಲ ಬೇರೆ ಕಡೆಯೂ ಆಕ್ಸಿಜನ್ ಕೊರತೆಯಿಂದ ಜನ ಸತ್ತಿದ್ದಾರೆ ಎಂದರು.
ಈ ಸರ್ಕಾರ ಏನು ಮಾಡುತ್ತಿದೆಯೋ ಗೊತ್ತಿಲ್ಲ ಹಾಗಾಗಿಯೇ ನಾವು ನಿನ್ನೆ ಮುಖ್ಯಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದೇವೆ. ಮುಖ್ಯಮಂತ್ರಿಗಳು, ಸಚಿವರುಗಳ ಮೇಲೆ ನಮಗೆ ನಂಬಿಕೆ ಇಲ್ಲ ಎಂದರು. ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲೆಗೆ ತೆರಳಿ ಕೆಲಸ ಮಾಡುತ್ತಿಲ್ಲ. ಜನರ ಕಷ್ಟ ಕೇಳುತ್ತಿಲ್ಲ. ಜನರ ನೋವಿಗೆ ಈ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟಿರುವವರ ಸಂಖ್ಯೆ ದೊಡ್ಡಿದಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ವಾಸ್ತವ ಸ್ಥಿತಿ ಹೇಳಿದರೆ ಜನ ಮತ್ತಷ್ಟು ಗಾಬರಿಯಾಗುತ್ತಾರೆ ಎಂದರು.
ಈ ಸಂಕಷ್ಟದಲ್ಲಿ ರಾಜಕಾರಣ ಮಾಡುವುದಕ್ಕೆ ನಮಗೆ ಆಸಕ್ತಿ ಇಲ್ಲ. ಜನರೇ ಈಗ ಜಾಗೃತರಾಗಬೇಕಾಗಿದೆ. ಸರ್ಕಾರದಿಂದ ಏನನ್ನೂ ನಿರೀಕ್ಷೆ ಮಾಡುವಂತಿಲ್ಲ ಎಂದು ಅವರು ಹೇಳಿದರು.