ರಾಜ್ಯಪಾಲರ ಅಂಗಳಕ್ಕೆ ಮಹಾ ಬಿಕ್ಕಟ್ಟು

ಮುಂಬೈ,ಜೂ.೨೩- ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಚದುರಂಗದಾಟಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಕೈಗೊಳ್ಳುವ ನಿರ್ಧಾರ ಕುತೂಹಲ ಕೆರಳಿಸಿದೆ.
ರಾಜಕೀಯ ಚದುರಂಗದಾಟದ ಲೆಕ್ಕಾಚಾರದಲ್ಲಿ ಬಂಡಾಯ ನಾಯಕ ಏಕ್‌ನಾಥ್‌ಶಿಂಧೆ ಮೇಲುಗೈ ಸಾಧಿಸಿದ್ದು, ತಮ್ಮ ಬಳಿ ೪೨ ಮಂದಿ ಶಿವಸೇನೆ ಶಾಸಕರಿದ್ದು, ಭೇಟಿಗೆ ಅವಕಾಶ ಕೋರಿ ಶಿಂಧೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಮಹಾರಾಷ್ಟ್ರ ಅಘಾಡಿ ಸರ್ಕಾರ ಪತನವಾಗುವುದು ಸನ್ನಿಹಿತವಾಗಿದೆ.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ನಂತರ ಸರ್ಕಾರ ಮತ್ತು ಮುಖ್ಯಮಂತ್ರಿ ಉದ್ಧವ್‌ಠಾಕ್ರೆ ವಿರುದ್ಧ ಸಚಿವ ಏಕ್‌ನಾಥ್‌ಶಿಂಧೆ ಬಂಡಾಯದ ಕಹಳೆ ಮೊಳಗಿಸಿದ್ದರಿಂದ ಅಘಾಡಿ ಸರ್ಕಾರ ಪತನವಾಗುವ ಸಾಧ್ಯತೆ ಹೆಚ್ಚಾಗಿದೆ.
ಶಿವಸೇನೆಯ ಇನ್ನೂ ನಾಲ್ವರು ಶಾಸಕರು ಏಕ್‌ನಾಥ್ ಬಣಕ್ಕೆ ರ್ಸೇಪಡೆಯಾಗಿದ್ದು, ಈಗಾಗಲೇ ಅವರು ವಿಮಾನದ ಮೂಲಕ ಗುವಾಹಟಿಗೆ ತಲುಪಿದ್ದಾರೆ. ಇದರಿಂದಾಗಿ ಶಾಸಕರ ಸಂಖ್ಯೆ ೪೨ಕ್ಕೇರಿದೆ. ನಂಬರ್‌ಗೇಮ್‌ನಲ್ಲಿ ಏಕ್‌ನಾಥ್‌ಶಿಂಧೆ ಮೇಲುಗೈ ಸಾಧಿಸಿದ್ದು, ಮುಖ್ಯಮಂತ್ರಿ ಉದ್ಧವ್‌ಠಾಕ್ರೆಗೆ ಹಿನ್ನೆಡೆಯಾಗಿದ್ದು, ಯಾವುದೇ ಕ್ಷಣದಲ್ಲೂ ಸಮ್ಮಿಶ್ರ ಸರ್ಕಾರ ಪತನವಾಗಲಿದೆ.
ಪಕ್ಷದ ೩ನೇ ಬಣದಷ್ಟು ಶಾಸಕರಿದ್ದಾಗ ಪ್ರತ್ಯೇಕ ಬಣ ರಚಿಸಿಕೊಳ್ಳಲು ಅವಕಾಶವಿದೆ. ಹೀಗಾಗಿ ರಾಜ್ಯಪಾಲರ ಭೇಟಿಗೂ ಶಿಂಧೆ ಮುಂದಾಗಿದ್ದಾರೆ. ಶಾಸಕರ ಸಹಿ ಇರುವ ಪತ್ರದ ಜತೆಗೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರ ಮುಂದೆ ಪರೇಡ್ ಮಾಡಲು ಸಜ್ಜಾಗಿದ್ದಾರೆ. ಹೀಗಾಗಿ, ರಾಜಕೀಯ ವಿದ್ಯಮಾನಗಳು ಕುತೂಹಲಕ್ಕೆಡೆ ಮಾಡಿಕೊಟ್ಟಿವೆ.
ಇದೇ ವೇಳೆ ಶಿವಸೇನೆ ನಾಯಕ ಸಂಜಯ್‌ರಾವುತ್ ಪ್ರತಿಕ್ರಿಯೆ ನೀಡಿ ತಮ್ಮ ಜತೆ ೨೦ ಮಂದಿ ಬಂಡಾಯದ
ಗುಂಪಿನಲ್ಲಿರುವ ಶಾಸಕರು ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಮುಂಬೈಗೆ ವಾಪಸ್ ಬಂದ ನಂತರ ಮುಂದಿನ ಸ್ಪಷ್ಟಚಿತ್ರಣ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಫೇಸ್‌ಬುಕ್ ಲೈವ್‌ನಲ್ಲಿ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದ ಠಾಕ್ರೆ ನಾನು ಅಧಿಕಾರದಲ್ಲಿ ಮುಂದುವರೆಯಲು ಇಷ್ಟವಿಲ್ಲದಿದ್ದರೆ ಶಿವಸೇನೆ ಶಾಸಕರು ನನ್ನ ಮುಂದೆ ಬಂದು ಹೇಳಲಿ ಎಂದು ತಿಳಿಸಿದ್ದರು. ಇದಾದ ಬಳಿಕ ತಮ್ಮ ಅಧಿಕೃತ ನಿವಾಸವನ್ನು ತೊರೆದು ಮಾತೋಶ್ರೀಗೆ ತೆರಳಿದ್ದಾರೆ. ಈ ಬೆಳವಣಿಗೆಯಿಂದಾಗಿ ಉದ್ಧವ್‌ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಮತ್ತೊಂದೆಡೆ ಮಹಾ ಅಘಾಡಿ ಸರ್ಕಾರ ಉಳಿಸಿಕೊಳ್ಳಲು ಎನ್‌ಸಿಪಿ ಮತ್ತು ಕಾಂಗ್ರೆಸ್ ತೆರೆಮರೆಯಲ್ಲಿ ಕಸರತ್ತು ನಡೆಸಿವೆ. ಎನ್‌ಸಿಪಿ ನಾಯಕ ಶರದ್‌ಪವಾರ್ ಪಕ್ಷದ ಶಾಸಕರೊಂದಿಗೆ ಸಭೆ ಸೇರಿ ರಾಜ್ಯದಲ್ಲಿ ತಲೆದೋರಿರುವ ರಾಜಕೀಯ ಅಸ್ಥರಿತೆ ಬಗ್ಗೆ ಸಮಾಲೋಚನೆ ನಡೆಸಿದರು.
ಶರದ್ ಪವಾರ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್, ಗೃಹ ಸಚಿವ ದಿಲೀಪ್‌ವಾಲ್ಸೆಪಾಟೀಲ್, ಸಚಿವರಾದ ಜಯಂತ್ ಪಾಟೀಲ್ ಹಲವು ಮುಖಂಡರು ಭಾಗವಹಿಸಿದ್ದರು.
ಒಂದು ವೇಳೆ ಸರ್ಕಾರ ಪತನಗೊಂಡರೆ ಎನ್‌ಸಿಪಿ ಪ್ರತಿಪಕ್ಷಗಳ ಸ್ಥಾನದಲ್ಲಿ ಕುಳಿತುಕೊಳ್ಳಲು ಸಿದ್ಧವಿರುವುದಾಗಿ ಎನ್‌ಸಿಪಿ ಮುಖಂಡ ಜಯಂತ್ ಪಾಟೀಲ್ ತಿಳಿಸಿದರು.
ಈ ಎಲ್ಲ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಅಘಾಡಿ ಸರ್ಕಾರದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮಾಹಿತಿಯನ್ನು ಗೃಹ ಸಚಿವ ಅಮಿತ್‌ಶಾ ಅವರಿಗೆ ನೀಡಿದ್ದಾರೆ.
ನಂಬರ್‌ಗೇಮ್ ಲೆಕ್ಕಾಚಾರದಲ್ಲಿ ಸರ್ಕಾರ ಪತನಗೊಂಡರೆ ಹೊಸ ಸರ್ಕಾರ ರಚನೆಗೆ ಬಿಜೆಪಿ ಮುಂದಾಗಿದೆ. ಮೂಲಗಳ ಪ್ರಕಾರ ಈಗಿರುವ ಬಿಜೆಪಿಯ ೧೦೬ ಹಾಗೂ ಏಕ್‌ನಾಥ್‌ಶಿಂಧೆ ಬಣದ ೪೨ ಶಾಸಕರ ಬೆಂಬಲ ಪಡೆದು ಶಿಂಧೆ ಮತ್ತು ಬಿಜೆಪಿ ಜತೆಗೂಡಿ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ತರಲು ರಂಗ ಸಜ್ಜಾಗಿದ್ದು, ಈಗಾಗಲೇ ಮಾತುಕತೆಗಳು ನಡೆದಿದ್ದು, ಶನಿವಾರದ ವೇಳೆಗೆ ಹೊಸ ಸರ್ಕಾರ ರಚನೆಯಾಗುವ ನಿರೀಕ್ಷೆ ಇದ್ದು, ಯಾರಿಗೆ ಯಾವ ಹುದ್ದೆ ನೀಡಬೇಕೆಂಬ ಬಗ್ಗೆ ನಿರ್ಧಾರವಾಗಬೇಕಿದೆ.
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಬಂಡಾಯ ನಾಯಕ ಏಕ್‌ನಾಥ್‌ಶಿಂಧೆ ಸ್ಪಷ್ಟ ಮೇಲುಗೈ ಸಾಧಿಸಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್‌ಠಾಕ್ರೆ ಯಾವುದೇ ಸಂದರ್ಭದಲ್ಲಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.
ಟಿಎಂಸಿ ಪ್ರತಿಭಟನೆ ಬಂಡಾಯ ನಾಯಕ ಏಕ್‌ನಾಥ್‌ಶಿಂಧೆ ಗುಂಪಿನಲ್ಲಿರುವ ಶಾಸಕರು ವಾಸ್ತವ್ಯ ಹೂಡಿರುವ ಗುವಾಹಟಿಯ ರ್‍ಯಾಡಿಸನ್ ಬ್ಲೂ ಹೋಟೆಲ್ ಎದುರು ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಟಿಎಂಸಿ ರಾಜ್ಯಾಧ್ಯಕ್ಷ ರಿಪುನ್‌ಬೋರಾ ನೇತೃತ್ವದಲ್ಲಿ ಹೋಟೆಲ್ ಮುಂದೆ ಜಮಾಯಿಸಿದ್ದ ನೂರಾರು ಟಿಎಂಸಿ ಕಾರ್ಯಕರ್ತರು ಶಿವಸೇನೆ ಶಾಸಕರ ವರ್ತನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಸ್ಸಾಂನಲ್ಲಿ ಪ್ರವಾಹದಿಂದ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಅವರ ನೆರವಿಗೆ ಧಾವಿಸದೆ ಮುಖ್ಯಮಂತ್ರಿಗಳು ಮಹಾರಾಷ್ಟ್ರದಿಂದ ಬಂದಿರುವ ಶಾಸಕರ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.