ರಾಜ್ಯಪಾಲರಿಗೆ ೧.೫ ಕೋಟಿ ಆಸ್ತಿ ಉಡುಗೊರೆ ಕೊಟ್ಟ ತಂದೆ

ಲಕ್ನೋ,ಮಾ.೬-ಮಗನೊಂದಿಗೆ ಮನಸ್ತಾಪ ಹೊಂದಿದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ತನ್ನ ೧.೫ ಕೋಟಿ ರೂಪಾಯಿ ಆಸ್ತಿಯನ್ನು ರಾಜ್ಯಪಾಲ ಆನಂದಿ ಬೆನ್ ಪಟೇಲ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಮಗ ಮತ್ತು ಸೊಸೆ ತಮ್ಮನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದು ಮನನೊಂದ ೮೦ ವರ್ಷದ ಮುಜಾಫರ್ ನಗರದ ನಿವಾಸಿ ನಾತು ಸಿಂಗ್ ಅವರು ಪಿತ್ರಾರ್ಜಿತವಾಗಿ ಬಂದ ಸ್ಥಿರಾಸ್ತಿಯನ್ನು ರಾಜ್ಯಪಾಲರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಮುಜಾಫರ್ ನಗರದ ಬಿರಾಲ್ ಗ್ರಾಮದ ೮೦ ವರ್ಷದ ನಾತು ಸಿಂಗ್, ಸದ್ಯ ವೃದ್ದಾಶ್ರಮದಲ್ಲಿ ವಾಸ ಮಾಡುತ್ತಿದ್ದಾರೆ. ಮಗ ಸೊಸೆ ಹಾಗು ಮೂವರು ಹೆಣ್ಣುಮಕ್ಕಳೂ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಹೀಗಾಗಿ ರಾಜ್ಯಪಾಲರಿಗೆ ಉಡುಗೊರೆಯಾಗಿ ತಮ್ಮ ಸ್ಥಿರಾಸ್ತಿ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಪುತ್ರ ಸೇರಿದಂತೆ ಮೂವರು ಹೆಣ್ಣು ಮಕ್ಕಳು ತಮ್ಮನ್ನು ಸರಿಯಾಗಿ ನೋಡಿಕೊಳ್ಳದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನನ್ನ ಆಸ್ತಿಯನ್ನು ರಾಜ್ಯಪಾಲರಿಗೆ ಉಡುಗೊರೆ ನೀಡಿದ್ದೇನೆ. ಇದರಲ್ಲಿ ಹಕ್ಕು ಸಾಧಿಸಲು ಮಕ್ಕಳಿಗೆ ಯಾವುದೇ ಹಕ್ಕಿಲ್ಲ ಎಂದು ಅವರು ತಿಳಿಸಿದ್ದಾರೆ.
ತಾವು ನಿಧನರಾದ ನಂತರ ತಾವು ನೀಡಿರುವ ಜಾಗದಲ್ಲಿ ಆಸ್ಪತ್ರೆ, ಶಾಲೆಗಳನ್ನು ತೆರೆದು ಅನೇಕ ಬಡವರಿಗೆ ಅನುಕೂಲಮಾಡಿಕೊಡಿ ಎಂದು ರಾಜ್ಯಪಾಲರಿಗೆ ನೀಡಿರುವ ಉಡುಗೊರೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು ಮಕ್ಕಳ ಜೊತೆ ವಾಸ ಮಾಡಬೇಕು ಎನ್ನುವ ಬಯಕೆಯಾಗಿತ್ತು. ಪುತ್ರ, ಮೂವರು ಪುತ್ರಿಯರು ನನ್ನ ಬಗ್ಗೆ ಕಾಳಜಿ ವಹಿಸಿದ ಹಿನ್ನೆಲೆಯಲ್ಲಿ ವೃದ್ಧಾಶ್ರಮದಲ್ಲಿ ಕಾಲ ಕಳೆಯುತ್ತಿದ್ದೇನೆ. ಹೀಗಾಗಿ ಅನಿವಾರ್ಯವಾಗಿ ತಮ್ಮ ಆಸ್ತಿಯನ್ನು ರಾಜ್ಯಪಾಲರಿಗೆ ಉಡುಗೊರೆಯಾಗಿ ನೀಡುತ್ತಿದ್ದೇನೆ ಎಂದು ನಾತು ಸಿಂಗ್ ಸ್ಪಷ್ಟಪಡಿಸಿದ್ದಾರೆ.
ವೃದ್ಧಾಶ್ರಮದ ಉಸ್ತುವಾರಿ ರೇಖಾ ಸಿಂಗ್ ಪ್ರತಿಕ್ರಿಯಿಸಿ, ನಾತು ಸಿಂಗ್ ಅವರ ಮನವೊಲಿಕೆ ಮಾಡಲು ಬಹಳಷ್ಟು ಪ್ರಯತ್ನ ಮಾಡಿದರೂ ಅವರು ಸ್ಪಂದಿಸದೆ ಹಠಮಾರಿತನ ಪ್ರದರ್ಶಿಸಿದ್ಧಾರೆ. ಅವರಿಗೆ ಆಗಿರುವ ನೋವು ಹೀಗೆ ಮಾಡಿರಬೇಕು ಎಂದು ತಿಳಿಸಿದ್ದಾರೆ.