ರಾಜ್ಯಪಾಲರಿಗೆ ಸೂಚನೆ ನೀಡುವಮಸೂದೆ ಅಂಗೀಕಾರಕ್ಕೆ ನಿರ್ಧಾರ

ಚೆನ್ನೈ,ಏ.೧೦-ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನಡುವೆ ಜಿದ್ದಾಜಿದ್ದಿ ನಡೆಯುತ್ತಿರುವಾಗಲೇ ರಾಜ್ಯಪಾಲರಿಗೆ ಸೂಕ್ತ ಸೂಚನೆ ನೀಡುವ ಮಸೂದೆಗಳನ್ನು ವಿಧಾನಸಭೆಯಲ್ಲಿ ಅಂಗೀಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯ ಸರ್ಕಾರ ಕೈಗೊಳ್ಳುವ ಮಸೂದೆಗಳನ್ನು ತಕ್ಷಣವೇ ಅಂಗೀಕರಿಸಲು ರಾಜ್ಯಪಾಲರಿಗೆ ಸೂಕ್ತ ಸೂಚನೆ ನೀಡುವಂತೆ ಕೇಂದ್ರ ಮತ್ತು ರಾಷ್ಟ್ರಪತಿಗಳನ್ನು ಒತ್ತಾಯಿಸಲು ನಿರ್ಧರಿಸಿದೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡಿದ್ದು ರಾಜ್ಯಪಾಲರು ತಮ್ಮ ಕರ್ತವ್ಯದಿಂದ “ತಪ್ಪಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಕಳುಹಿಸಿದ ೧೪ ಮಸೂದೆಗಳಿಗೆ ಒಪ್ಪಿಗೆ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರು ತಮ್ಮ ಆಡಳಿತಾತ್ಮಕ ಕರ್ತವ್ಯ ಮತ್ತು ಪಾತ್ರಗಳಿಂದ ತಪ್ಪಿಸಿಕೊಳ್ಳುವ ಮೂಲಕ ಕೋಟ್ಯಂತರ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮಂಡಿಸಿದ ಮಸೂದೆಗಳು, ಸುಗ್ರೀವಾಜ್ಞೆ ಮತ್ತು ಕಾಯಿದೆಯಂತಹ ೧೪ ದಾಖಲೆಗಳಿಗೆ ಒಪ್ಪಿಗೆ ನೀಡಲಿಲ್ಲ,” ಎಂದು ದೂರಿದ್ದಾರೆ.
ಈ ತಿಂಗಳ ಆರಂಭದಲ್ಲಿ, ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರು ನಾಗರಿಕ ಸೇವಾ ಆಕಾಂಕ್ಷಿಗಳೊಂದಿಗೆ ಸಂವಾದ ನಡೆಸುವಾಗ, ಸಂವಿಧಾನದಲ್ಲಿ ರಾಜ್ಯಪಾಲರ ಪಾತ್ರವನ್ನು ವಿವರಿಸಿದರು ಮತ್ತು ಅಸೆಂಬ್ಲಿ ಅಂಗೀಕರಿಸಿದ ಮಸೂದೆಗೆ ಒಪ್ಪಿಗೆ ನೀಡುವ ಅಥವಾ ತಡೆಹಿಡಿಯುವ ಅವಕಾಶವಿದೆ ಎಂದು ಹೇಳಿದ್ದಾರೆ.
ರಾಜ್ಯಪಾಲರು ಮಸೂದೆಯನ್ನು “ಸಾಂವಿಧಾನಿಕ ಮಿತಿಯನ್ನು ಉಲ್ಲಂಘಿಸದಿದ್ದರೆ” ಮತ್ತು ರಾಜ್ಯ ಸರ್ಕಾರ “ತನ್ನ ಸಾಮರ್ಥ್ಯವನ್ನು ಮೀರದಿದ್ದರೆ” ಪರಿಶೀಲಿಸುತ್ತಾರೆ ಎಂದು ಅವರು ಹೇಳಿದ್ದರು
ರಾಜ್ಯಪಾಲರ ಹೇಳಿಕೆಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿ ರಾಜ್ಯಪಾಲರ ಹೇಳಿಕೆಗೆ ತಿರುಗೇಟು ನೀಡಿದ್ದರು
ಆನ್‌ಲೈನ್ ಜೂಜು ನಿಷೇಧ ಮಸೂದೆಯನ್ನು ರಾಜ್ಯ ವಿಧಾನಸಭೆ ಅಂಗೀಕರಿಸಿದ ನಾಲ್ಕು ತಿಂಗಳ ನಂತರ ರಾಜ್ಯಪಾಲ ರವಿ ಅದನ್ನು ಹಿಂದಿರುಗಿಸಿದರು.ಇದರಿಂದ ಮುಖ್ಯಮಂತ್ರಿ ಸ್ಟಾಲಿನ್ ಅವರು ರಾಜ್ಯ ಪಾಲರ ವಿರುದ್ದ ಅಸಮಾಧಾನ ಹೊರಹಾಕಿದ್ದರು
ಚೆನ್ನೈ ತೊರೆಯಿರಿ: ಪೋಸ್ಟರ್ ಅಭಿಯಾನ:
ರಾಜ್ಯ ಸರ್ಕಾರದೊಂದಿಗೆ ಜಟಾಪಟಿಗೆ ಇಳಿದಿರುವ ರಾಜ್ಯಪಾಲ ರವಿ ಅವರನ್ನು ವಾಪಸ್ ಕರೆಸಿಕೊಳ್ಳಬೇಕು ಎನ್ನುವ ಪೋಸ್ಟರ್ , ತಮಿಳುನಾಡಿನಾದ್ಯಂತ ಪೋಸ್ಟರ್ ಹಾಕಿ ಡಿಎಂಕೆ ಕಾರ್ಯಕರ್ತರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರು ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರ ಹೇಳಿಕೆಗೆ ಖಂಡನೀಯ ಎಂದಿದ್ದಾರೆ.