ರಾಜ್ಯಪಾಲರಿಗೆ ಲಂಚ ದೂರು ಇಬ್ಬರು ಸಿಐಡಿ ವಶಕ್ಕೆ

ಬೆಂಗಳೂರು, ಆ. ೨೦- ಕೃಷಿ ಅಧಿಕಾರಿಗಳ ವರ್ಗಾವಣೆಗೆ ಸಚಿವ ಚಲುವರಾಯಸ್ವಾಮಿ ಲಂಚ ಕೇಳಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಇಬ್ಬರು ಕೃಷಿ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದ್ದಾರೆ.
ಕೃಷಿ ಅಧಿಕಾರಿಗಳ ವರ್ಗಾವಣೆ ಕುರಿತಂತೆ ಇಲಾಖೆಯ ಕೆಲ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಅಲ್ಲದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂದೆ ನಡೆಯುತ್ತಿದೆ ಎಂದು ಆರೋಪಿಸಿ ತಮ್ಮ ಬಳಿ ಪೆನ್ ಡ್ರೈವ್ ಇದೆ ಎಂದು ಬಾಂಬ್ ಸಿಡಿಸಿದ್ದರು.
ಈ ಎಲ್ಲ ಪ್ರಕರಣಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಐಡಿ ತನಿಖೆಗೆ ಒಪ್ಪಿಸಿದ್ದರು. ಸಿಐಡಿ ತನಿಖೆ ಬಿರುಸು ಗೊಳಿಸಿ ಕೆಆರ್ ಪೇಟೆಯ ಕೃಷಿ ಅಧಿಕಾರಿಗಳಾದ ಶಿವಪ್ರಸಾದ್ ಹಾಗೂ ಗುರುದತ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ಗುರಿಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೃಷಿ ಅಧಿಕಾರಿಗಳ ವರ್ಗಾವಣೆ ಕುರಿತಂತೆ ಸಚಿವ ಚಲುವರಾಯ ಸ್ವಾಮಿ ಅವರು ಲಂಚ ಕೇಳುತ್ತಿದ್ದಾರೆ ಎಂದು ಈ ಅಧಿಕಾರಿಗಳು ಪತ್ರ ಬರೆದಿರುವ ಹಿಂದಿನ ಉದ್ದೇಶ ಹಾಗೂ ಇತರ ಆಯಾಮಗಳ ಬಗ್ಗೆಯೂ ಸಿಐಡಿ ತನಿಖೆ ನಡೆಸಲು ಮುಂದಾಗಿದೆ.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯ ಸ್ವಾಮಿ, ಇದುವರೆಗೆ ಸಿಐಡಿ ಅಧಿಕಾರಿಗಳಿಂದ ಯಾವುದೇ ವರದಿ ತಮ್ಮ ಕೈ ಸೇರಿಲ್ಲ. ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ. ಈ ಬಗ್ಗೆ ಊಹಾಪೋಹ ಹೇಳಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.