ರಾಜ್ಯದ 90 ಲಕ್ಷ ಮನೆಗಳಿಗೆ ನಳನೀರು ಸಂಪರ್ಕ


ಚಿತ್ರದುರ್ಗ,ನ.4; ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ 2024ರೊಳಗೆ ರಾಜ್ಯದ 90 ಲಕ್ಷ ಮನೆಗಳಿಗೆ ನಳನೀರು ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಹೊಳಲ್ಕೆರೆ ತಾಲ್ಲೂಕಿನ ಮುತ್ತುಗದೂರು ಗ್ರಾಮದ ಟಿ.ಬಿ.ಸರ್ಕಲ್ ತರಳಬಾಳು ನಗರದಲ್ಲಿ  ಜಲಜೀವನ್ ಮಿಷನ್ ಯೋಜನೆಯಡಿ ನಿರ್ವಹಿಸಿರುವ ಕಾರ್ಯಾತ್ಮಕ ನಳನೀರು ಸಂಪರ್ಕದ ಕಾಮಗಾರಿ ವೀಕ್ಷಣೆ ಮಾಡಿ ಅವರು ಮಾತನಾಡಿದರು.ಪ್ರತಿ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವುದು ಜಲ ಜೀವನ ಮಿಷನ್ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು, ಈಗಾಗಲೇ ಕಾಮಗಾರಿ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಶೇ.50ರ ಅನುಪಾತದಲ್ಲಿ ಕ್ರಿಯಾ ಯೋಜನೆ  ತಯಾರಿಸಲಾಗಿದ್ದು, 2024ರೊಳಗೆ ರಾಜ್ಯದ 90ಲಕ್ಷ ಮನೆಗಳಿಗೆ ನಳನೀರು ಸಂಪರ್ಕಿಸುವ ಕಾಮಗಾರಿ ಮುಕ್ತಾಯಗೊಳಿಸಲಾಗುವುದು ಎಂದು ಎಂದರು.
 ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕು ಸೇರಿದಂತೆ ಒಟ್ಟು ಆರು ತಾಲ್ಲೂಕುಗಳಿಂದ ರೂ.516 ಕೋಟಿಯಷ್ಟು ಕಾಮಗಾರಿಗಳಿಗೆ ಕ್ರಮಕೈಗೊಳ್ಳಲಾಗಿದ್ದು, ಜಿಲ್ಲೆಯ 3,46,186 ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ಕಾಮಗಾರಿ ಶುರವಾಗಿದೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 6865 ಮನೆಗಳಿಗೆ ನಳ ಸಂಪರ್ಕಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಲಾಗಿದ್ದು, ಜನವರಿ-2022ರ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಚಿತ್ರದುರ್ಗ ತಾಲ್ಲೂಕಿನ 22 ಜನವಸತಿಗಳು ಹೊಳಲ್ಕೆರೆ ತಾಲ್ಲೂಕಿನ 7 ಜನವಸತಿಗಳ ಒಟ್ಟು 6865 ಮನೆಗಳಿಗೆ ರೂ.11.14 ಕೋಟಿ ವೆಚ್ಚದಲ್ಲಿ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲು ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ಕಾಮಗಾರಿಗಳನ್ನು ಟೆಂಡರ್ ಪ್ರಕಾರ ಗುತ್ತಿಗೆದಾರರಿಗೆ ವಹಿಸಲಾಗಿದ್ದು, ಈವರಗೆ ಒಟ್ಟು  6 ಜನವಸತಿಗಳಲ್ಲಿನ ನಳ ಸಂಪರ್ಕ ಪೂರ್ಣಗೊಂಡಿರುತ್ತದೆ ಎಂದರು. ಉಳಿದ ಕಾಮಗಾರಿಗಳಲ್ಲಿ 3 ಜನವಸತಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ ಎಂದರು.
2021-22ನೇ ಸಾಲಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಜಿಲ್ಲೆಯ 682 ಜನವಸತಿಗಳನ್ನು ತೆಗೆದುಕೊಂಡಿದ್ದು, ಅದರಲ್ಲಿ ಚಳ್ಳಕೆರೆ ತಾಲ್ಲೂಕಿನ 341 ಜನವಸತಿಗಳು, ಚಿತ್ರದುರ್ಗ ತಾಲ್ಲೂಕಿನ 72 ಜನವಸತಿಗಳು, ಹಿರಿಯೂರು ತಾಲ್ಲೂಕಿನ 116 ಜನವಸತಿಗಳು, ಹೊಳಲ್ಕೆರೆ ತಾಲ್ಲೂಕಿನ 18 ಜನವಸತಿಗಳು ಹಾಗೂ ಮೊಳಕಾಲ್ಮುರು ತಾಲ್ಲೂಕಿನ 135 ಜನವಸತಿಗಳನ್ನು ತೆಗೆದುಕೊಳ್ಳಲಾಗಿದೆ. 2021-22ನೇ ಸಾಲಿನ ಕಾಮಗಾರಿಗಳ ಮೊತ್ತ ರೂ.237 ಕೋಟಿಗಳಾಗಿದ್ದು, ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
 2022-23ನೇ ಸಾಲಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 885 ಜನವಸತಿಗಳನ್ನು ತೆಗೆದುಕೊಂಡಿದ್ದು, ಚಿತ್ರದುರ್ಗ ತಾಲ್ಲೂಕಿನ 173 ಜನವಸತಿಗಳು, ಹಿರಿಯೂರು ತಾಲ್ಲೂಕಿನ 168 ಜನವಸತಿಗಳು, ಹೊಳಲ್ಕೆರೆ ತಾಲ್ಲೂಕಿನ 198 ಜನವಸತಿಗಳು, ಹೊಸದುರ್ಗ ತಾಲ್ಲೂಕಿನ 346 ಜನವಸತಿಗಳನ್ನು ತೆಗೆದುಕೊಳ್ಳಲಾಗಿದೆ. ಈ ಕಾಮಗಾರಿಗಳ ಅಂದಾಜು ಮೊತ್ತ ರೂ.266.02 ಕೋಟಿಗಳಾಗಿರುತ್ತದೆ ಎಂದು ಎಂದರು.  
ಮುತ್ತಗದೂರು ಗ್ರಾಮ ಪಂಚಾಯಿತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಗ್ರಾಮೀಣಾಭಿವೃದ್ಧಿ ಸಚಿವರು, ಯೋಜನೆಯ ಕುರಿತು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಪಡೆದರು.
ಜಲಜೀವನ್ ಮಿಷನ್ ಯೋಜನೆಯಡಿ ಕಳಪೆ ಕಾಮಗಾರಿ ನಡೆಯುತ್ತಿದೆ. ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕಾಗಿ ಸಾರ್ವಜನಿಕರು ವಂತಿಗೆ ನೀಡಬೇಕಾಗಿದೆ. ಸಾರ್ವಜನಿಕರು ಪಾವತಿಸುವ ವಂತಿಗೆಯನ್ನು ಕಡಿಮೆ ಮಾಡಬೇಕು, ಸಾಸಲು ಗ್ರಾಮಕ್ಕೆ ಕಚ್ಚಾ ನೀರು ಬರುತ್ತಿವೆ. ಸಾಸಲು ಗ್ರಾಮಕ್ಕೆ ಶುದ್ಧ ನೀರು ಪೂರೈಸಬೇಕು. ಎಂದು ಮುತ್ತುಗದೂರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಜಲಜೀವನ್ ಮಿಷನ್ ಯೋಜನೆಯಡಿ ನಡೆಯುವ ಕಾಮಗಾರಿಯನ್ನು ಪ್ರತಿನಿತ್ಯವೂ ಪರಿಶೀಲಿಸಬೇಕು.  ಯಾವುದೇ ಸಮಸ್ಯೆಯಾಗದಂತೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಸಾಸಲು ಗ್ರಾಮಕ್ಕೆ ತಾತ್ಕಾಲಿಕವಾಗಿ ಕಚ್ಚಾ ನೀರು ಬರುತ್ತಿವೆ. ಈ ಬಗ್ಗೆ ಕ್ರಮವಹಿಸಿ ಶುದ್ಧ ನೀರು ಪೂರೈಸಲಾಗುವುದು. ಸಾರ್ವಜನಿಕರು ಪಾವತಿಸುವ ವಂತಿಗೆಯನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.  
ಈ ಸಂದರ್ಭದಲ್ಲಿ ಮುತ್ತುಗದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರವೀಣ ಗೋಡೆಮನೆ, ಉಪಾಧ್ಯಕ್ಷೆ ಗಿರಿಜಮ್ಮ ಮಹೇಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಜ್ಞಾನೇಶ್, ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ್ ಎಸ್.ನಾಡರ್, ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಗಂಗಣ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಟರಾಜ್, ಗುತ್ತಿಗೆದಾರ ನಾಗೇಶ್ವರ್ ರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ ವಿವರ: ಹೊಳಲ್ಕೆರೆ ತಾಲ್ಲೂಕಿನ ಮುತ್ತುಗದೂರು ಗ್ರಾಮದ ಟಿ.ಬಿ.ಸರ್ಕಲ್ ತರಳಬಾಳು ನಗರದಲ್ಲಿ ಬುಧವಾರ ಜಲಜೀವನ್ ಮಿಷನ್ ಯೋಜನೆಯಡಿ ನಿರ್ವಹಿಸಿರುವ ಕಾರ್ಯಾತ್ಮಕ ನಳನೀರು ಸಂಪರ್ಕದ ಕಾಮಗಾರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ವೀಕ್ಷಿಸಿದರು.
ಫೋಟೋ ವಿವರ: ಹೊಳಲ್ಕೆರೆ ತಾಲ್ಲೂಕಿನ ಮುತ್ತುಗದೂರು ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.