ರಾಜ್ಯದ 7 ಮಂದಿ ಸೇರಿ 39 ಅಭ್ಯರ್ಥಿಗಳ ‘ ಕೈ’ಮೊದಲ ಪಟ್ಟಿ ಬಿಡುಗಡೆ

ನವದೆಹಲಿ,ಮಾ.8-ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದ 7 ಮಂದಿ ಅಭ್ಯರ್ಥಿಗಳು ಸೇರಿದಂತೆ ತನ್ನ ಮೊದಲ ಪಟ್ಟಿಯಲ್ಲಿ 39 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

ಕರ್ನಾಟಕದಿಂದ 7 ಮಂದಿ, ಕೇರಳ 16, ಛತ್ತೀಸ್ ಗಢ 6, ತೆಲಂಗಾಣ 4, ಮೇಘಾಲಯ 2, ನಾಗಲ್ಯಾಂಡ್, ಸಿಕ್ಕಿಂ, ತ್ರಿಪುರಾ ಹಾಗೂ ಲಕ್ಷದ್ವೀಪದಿಂದ ತಲಾ ಒಬ್ಬ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ದೆಹಲಿಯಲ್ಲಿಂದು ಪ್ರಕಟಿಸಿದ್ದಾರೆ.

ಕೇರಳದ ವೈನಾಡಿನಿಂದ ರಾಹುಲ್ ಗಾಂಧಿ ಮತ್ತೊಮ್ಮ ಸ್ಪರ್ಧಿಸುತ್ತಿದ್ದರೆ, ತಿರುವನಂತಪುರಂನಿಂದ ಶಶಿ ತರೂರು, ಆಳಪ್ಪಳದಿಂದ ಕೆ.ಸಿ. ವೇಣುಗೋಪಾಲ್ ಸ್ಪರ್ಧಿಸುತ್ತಿದ್ದಾರೆ, ಛತ್ತೀಸ್ ಗಢದ ರಾಜನಂದಗಾವ್ ನಿಂದ ಭೂಪೇಶ್ ಭಗೇಲ್ ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಕರ್ನಾಟಕದಿಂದ ಯಾರಿಗೆ:

ವಿಜಯಪುರ ಕ್ಷೇತ್ರ- ಎಚ್.ಆರ್. ಅಲಗೂರು, ಹಾವೇರಿ – ಆನಂದಸ್ವಾಮಿ ಗಡ್ಡದೇವರ ಮಠ, ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್, ಹಾಸನ – ಎಂ. ಶ್ರೇಯಸ್ ಪಟೇಲ್, ತುಮಕೂರು – ಎಸ್. ಮುದ್ದಹನುಮೇಗೌಡ, ಮಂಡ್ಯ- ವೆಂಕಟ ರಾಮೇಗೌಡ(ಸ್ಟಾರ್ ಚಂದ್ರು), ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ. ಸುರೇಶ್ ಅವರಿಗೆ ಮೊದಲ ಪಟ್ಟಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ತೊರೆದು ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದ ಮಾಜಿ ಸಂಸದ ಎಸ್ ಪಿ ಮುದ್ದ ಹನುಮೇಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಇದರ ಜೊತೆ ಹೊಸಬರಿಗೂ ಅವಕಾಶ ಮಾಡಿಕೊಡಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಚುನಾವಣಾ ಸಮಿತಿ ಸಭೆಯಲ್ಲಿ 39 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಬಿಡುಗಡೆ ಮಾಡಲಾಗಿದೆ.
ಇನ್ನುಳಿದ ಕ್ಷೇತ್ರಗಳಿಗೆ ಹಂತಹಂತವಾಗಿ ಹೆಸರುಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.