ರಾಜ್ಯದ 263 ಕಡೆ ಲಸಿಕೆ ತಾಲೀಮು

ಬೆಂಗಳೂರು,ಜ.೮- ಸಂಕ್ರಾಂತಿ ವೇಳೆಗೆ ಕೊರೊನಾ ಲಸಿಕೆ ಅಭಿಯಾನ ಆರಂಭವಾಗುವುದು ನಿಶ್ಚಿತವಾಗಿರುವಾಗಲೇ ಲಸಿಕೆ ಅಭಿಯಾನದ ಯಶಸ್ಸಿಗೆ ಪೂರ್ವಭಾವಿಯಾಗಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಇಂದು ಲಸಿಕೆಯ ತಾಲೀಮು ನಡೆದಿದ್ದು, ರಾಜ್ಯದ ೨೬೩ ಕಡೆ ಲಸಿಕೆ ನೀಡಿಕೆಯ ತಾಲೀಮು ನಡೆದಿದೆ.
ಕೊರೊನಾ ಲಸಿಕೆ ನೀಡಿಕೆ ಸಂದರ್ಭದಲ್ಲಿ ಉದ್ಬವವಾಗುವ ಸವಾಲುಗಳು, ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ೨ನೇ ಲಸಿಕಾ ನೀಡಿಕೆ ತಾಲೀಮು ನಡೆದಿದೆ. ಕಳೆದ ಜ. ೨ ರಂದು ರಾಜ್ಯದ ೫ ಜಿಲ್ಲೆಗಳಲ್ಲಿ ಲಸಿಕೆಯ ತಾಲೀಮನ್ನು ನಡೆಸಲಾಗಿದೆ. ಇಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲು ಲಸಿಕಾ ತಾಲೀಮು ನಡೆದಿದೆ.
ರಾಜ್ಯದ ೨೪ ಜಿಲ್ಲಾಸ್ಪತ್ರೆಗಳು, ೨೦ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ೪೩ ತಾಲ್ಲೂಕು ಆಸ್ಪತ್ರೆಗಳು, ೩೧ ಸಮುದಾಯ ಆರೋಗ್ಯ ಕೇಂದ್ರಗಳು, ೮೭ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ೩೦ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ೨೮ ಖಾಸಗಿ ಆರೋಗ್ಯ ಕೇಂದ್ರಗಳೂ ಸೇರಿದಂತೆ ರಾಜ್ಯಾದ್ಯಂತ ಒಟ್ಟು ೨೩೩ ಸ್ಥಳಗಳಲ್ಲಿ ಈ ಲಸಿಕಾ ತಾಲೀಮು ನಡೆದಿದೆ.
ಲಸಿಕೆ ನೀಡಿಕೆ ಸಂದರ್ಭದಲ್ಲಿ ಪಾಲಿಸಲಾಗುವ ಎಲ್ಲ ಪ್ರಕ್ರಿಯೆಗಳನ್ನು ಈ ತಾಲೀಮಿನ ಸಂದರ್ಭದಲ್ಲಿ ನಡೆಸಲಾಗಿದೆ.
ಈಗಾಗಲೇ ನೋಂದಣಿ ಮಾಡಿಕೊಂಡಿರುವ ಆರೋಗ್ಯ ಕಾರ್ಯಕರ್ತರ ಪೈಕಿ ೩೫ ಮಂದಿಯ ಮೊಬೈಲ್‌ಗಳಿಗೆ ಸಂದೇಶ ಕಳುಹಿಸಿ ತಾಲೀಮು ಕಾರ್ಯಾಚರಣೆ ನಡೆಯಿತು.
ರಾಜ್ಯದ ಎಲ್ಲೆಡೆ ತಾಲೀಮು ಯಾವುದೇ ಅಡೆತಡೆ ಇಲ್ಲದೆ ಅಬಾಧಿತವಾಗಿ ನಡೆದಿದ್ದು, ಕೊರೊನಾ ಲಸಿಕೆ ಆಂದೋಲನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈ ತಾಲೀಮು ಮಹತ್ವದ ಹೆಜ್ಜೆ ಎನಿಸಿದೆ.
ಸುಧಾಕರ್ ಭೇಟಿ
ರಾಜ್ಯದಲ್ಲಿ ಇಂದು ನಡೆದಿರುವ ಕೊರೊನಾ ಲಸಿಕೆಯ ತಾಲೀಮಿನ ಕೇಂದ್ರಗಳಿಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಭೇಟಿ ನೀಡಿ ತಾಲೀಮನ್ನು ಪ್ರಕ್ರಿಯೆಗಳನ್ನು ವೀಕ್ಷಿಸಿದರು.

ರಾಜ್ಯದಲ್ಲಿಂದು ಕೊರೊನಾ ಲಸಿಕೆಯ ೨ನೇ ತಾಲೀಮು.

ರಾಜ್ಯದ ೨೬೩ ಸ್ಥಳಗಳಲ್ಲಿ ತಾಲೀಮು.

ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ತಾಲೀಮು ನಡೆದಿದೆ.

ಪ್ರತಿ ಕೇಂದ್ರಗಳಲ್ಲೂ ೨೫ ಸ್ವಯಂ ಸೇವಕರಿಗೆ ತಾಲೀಮು ಕಾರ್ಯಾಚರಣೆ.

ಈ ತಾಲೀಮಿತ ಮೂಲಕ ಕೊರೊನಾ ಲಸಿಕೆ ಆಂದೋಲನಕ್ಕೆ ಸರ್ವ ಸಿದ್ಧತೆ.

ತಾಲೀಮು ಕೇಂದ್ರಗಳಿಗೆ ಸಚಿವ ಡಾ. ಕೆ. ಸುಧಾಕರ್ ಭೇಟಿ.