ರಾಜ್ಯದ 240 ಖೈದಿಗಳಿಗೆ ಕೊರೋನಾ:ಬಸವರಾಜ ಬೊಮ್ಮಾಯಿ

ಬೆಂಗಳೂರು, ಏ.29- ಕೋವಿಡ್ ಎರಡನೇ ಅಲೆ ತೀವ್ರಗೊಂಡಿದ್ದು, ರಾಜ್ಯದೆಲ್ಲೆಡೆ ಕಾರಾಗೃಹಗಳಲ್ಲಿರುವ 240 ಮಂದಿ ಖೈದಿಗಳಿಗೆ ಕೊರೋನಾ ಸೋಂಕು ತಗುಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿಂದು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಲಾದ ಮುಂಜಾಗ್ರತಾ ಕ್ರಮಗಳು ಕುರಿತು ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾರಾಗೃಹಗಳಲ್ಲಿ ಕೋವಿಡ್ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸುವಂತೆ ಅವರು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಒಟ್ಟು 49 ಕಾರಾಗೃಹಗಳಿವೆ. ಅವುಗಳಲ್ಲಿ 240 ಖೈದಿಗಳಿಗೆ ಕೋವಿಡ್ ಸೋಂಕು ತಗುಲಿದೆ. ಕೋವಿಡ್ ರೋಗ ಲಕ್ಷಣಗಳು ಕಂಡುಬಂದ ಖೈದಿಗಳನ್ನು ತಕ್ಷಣವೇ ತಪಾಸಣೆಗೊಳಪಡಿಸಲಾಗುತ್ತಿದೆ. ಸೋಂಕು ತಗುಲಿರುವ ಖೈದಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಕೋವಿಡ್ ನಿಂದ ಗುಣಮುಖರಾದ ನಂತರವೇ ಅವರನ್ನು ಕೇಂದ್ರ ಕಾರಾಗ್ರಹಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಹೊಸ ಖೈದಿಗಳು ಕಾರಾಗ್ರಹಕ್ಕೆ ಬಂದರೆ ಅವರನ್ನು 14 ದಿನಗಳ ಕಾಲ ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತಿದೆ. ನಂತರ ಅವರನ್ನು ಆರ್ ಟಿ ಪಿ ಸಿ ಆರ್ ಟೆಸ್ಟಿಗೆ ಒಳಪಡಿಸಲಾಗುತ್ತದೆ.

ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ನಂತರವಷ್ಟೇ ಅವರಿಗೆ ಕಾರಾಗೃಹದೊಳಗೆ ಪ್ರವೇಶ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ರೀತಿ ಎಲ್ಲ ಕಾರಾಗೃಹಗಳಲ್ಲಿ ಕೋವಿಡ್ ವಿಚಾರವಾಗಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

5 ಕೋಟಿ: ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿ ಕೋವಿಡ್ ಹೋರಾಟಕ್ಕೆ ಬೇಕಾದ ಅಗತ್ಯ ವೈದ್ಯಕೀಯ ಉಪಕರಣ ಮತ್ತು ಸೋಂಕು ನಿವಾರಕ ಔಷಧೋಪಚಾರಗಳಿಗಾಗಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಸಿದ್ದಪಡಿಸಲಾಗುತ್ತಿದೆ. 2 ಕೋಟಿ ರೂಪಾಯಿ ಮೊತ್ತದ ಯೋಜನೆಯನ್ನು ಪ್ರಸ್ತುತ ಐದು ಕೋಟಿಗೆ ಹೆಚ್ಚಿಸಲಾಗಿದೆ. ಎಸ್ ಡಿ ಆರ್ ಎಫ್ ನಿಧಿ ಅಡಿ ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಕಾರಾಗೃಹ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಉಪಸ್ಥಿತರಿದ್ದರು.