ರಾಜ್ಯದ 235 ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಧತೆ

ಬೆಂಗಳೂರು, ಜ. ೯- ರಾಜ್ಯದಲ್ಲಿ ಕೊರೊನಾ ಲಸಿಕೆ ನೀಡಿಕೆಗೆ ಸರ್ವ ಸಿದ್ದತೆಗಳು ಆಗಿದ್ದು, ೨೩೫ ಕೇಂದ್ರಗಳನ್ನು ಲಸಿಕೆ ನೀಡಿಕೆಗೆ ಗುರುತಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಏಕಕಾಲದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕೆ ಆನ್‌ಲೈನ್‌ನಲ್ಲಿ ಚಾಲನೆ ನೀಡುವರು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಕೊರೊನಾ ಲಸಿಕೆ ನೀಡಿಕೆಯ ದಿನಾಂಕ ಇನ್ನು ನಿಗದಿಯಾಗಿಲ್ಲ. ಸೋಮವಾರ ಪ್ರಧಾನಿಗಳು ಎಲ್ಲ ರಾಜ್ಯಗಳ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಜತೆಗಿನ ವಿಡಿಯೋ ಸಂವಾದ ಸಂದರ್ಭದಲ್ಲಿ ದಿನಾಂಕ ಪ್ರಕಟಿಸುವ ನಿರೀಕ್ಷೆ ಇದೆ ಎಂದು ಅವರು ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ದೇಶಾದ್ಯಂತ ೫ ಸಾವಿರ ಕೇಂದ್ರಗಳಲ್ಲಿ ಒಮ್ಮೆಗೆ ಲಸಿಕೆ ನೀಡಿಕೆಗೆ ಚಾಲನೆ ನೀಡಲು ಕೇಂದ್ರದ ಆರೋಗ್ಯ ಸಚಿವಾಲಯ ಸಿದ್ದತೆ ಮಾಡಿಕೊಂಡಿದೆ. ರಾಜ್ಯದಲ್ಲೂ ಸಿದ್ದತೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರು ಆನ್‌ಲೈನ್‌ನಲ್ಲಿ ಈ ಎಲ್ಲ ೫ ಸಾವಿರ ಕೇಂದ್ರಗಳಲ್ಲಿ ಏಕಕಾಲದಲ್ಲಿ ಲಸಿಕೆ ನೀಡಿಕೆಗೆ ಚಾಲನೆ ನೀಡುವರು. ರಾಜ್ಯದಲ್ಲೂ ಬೆಂಗಳೂರು ಮತ್ತು ಹುಬ್ಬಳ್ಳಿಯ ತಲಾ ೧ ಲಸಿಕಾ ಕೇಂದ್ರದಲ್ಲಿ ಪ್ರಧಾನಿಯವರೇ ಲಸಿಕೆ ನೀಡಿಕೆಗೆ ಚಾಲನೆ ನೀಡಲಿದ್ದಾರೆ ಎಂದರು.
ರಾಜ್ಯಕ್ಕೆ ಮೊದಲ ಹಂತದಲ್ಲಿ ೧೩.೯೦ ಲಕ್ಷ ಕೊರೊನಾ ಲಸಿಕೆ ಬರಲಿದ್ದು, ಲಸಿಕೆ ಸಂಗ್ರಹಣೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಕೊರೊನಾ ಲಸಿಕೆಗಳು ಶೀಘ್ರದಲ್ಲೇ ರಾಜ್ಯಕ್ಕೆ ಬರಲಿದ್ದು, ಬಹುಶಃ ನಾಳೆ ಇಲ್ಲವೇ ನಾಳಿದ್ದು ಲಸಿಕೆ ರಾಜ್ಯಕ್ಕೆ ಬರಲಿದೆ ಎಂದು ಅವರು ಹೇಳಿದರು.
ಈಗಾಗಲೇ ಲಸಿಕೆ ನೀಡಿಕೆ ಸಿರಂಜ್‌ಗಳು, ಲಸಿಕೆ ಸಂಗ್ರಹಣೆಯ ಫೀಜರ್‌ಗಳು, ಇತರ ಪರಿಕರಗಳು ಕೇಂದ್ರದಿಂದ ರಾಜ್ಯಕ್ಕೆ ಬಂದಿವೆ ಎಂದರು.
ಸೋಮವಾರ ನಡೆಯಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ನೀಡಿಕೆಯ ದಿನಾಂಕದ ಘೋಷಣೆ ಮಾಡಬಹುದು.ಸದ್ಯಕ್ಕಂತೂ ಲಸಿಕೆ ನೀಡಿಕೆ ದಿನಾಂಕ ಇನ್ನು ನಿರ್ಧಾರ ಆಗಿಲ್ಲ ಎಂದರು.
ಇಂದು ಕೇಂದ್ರದ ಆರೋಗ್ಯ ಸಂಪುಟ ಕಾರ್ಯದರ್ಶಿಗಳು ಎಲ್ಲ ರಾಜ್ಯದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳ ಜತೆ ವಿಡಿಯೋ ಸಂವಾದ ನಡೆಸಿ, ಲಸಿಕೆ ಸಂಗ್ರಹಣೆ, ಸರಬರಾಜು ಎಲ್ಲದರ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ ಎಂದರು.
ಲಸಿಕೆ ನೀಡಿಕೆ ಆರಂಭವಾದ ನಂತರ ಯಾರಿಗೆ ಎಷ್ಟು ಡೋಸ್ ಲಸಿಕೆ ಕೊಡಬೇಕು, ಎಷ್ಟು ದಿನದ ಅವಧಿಯಲ್ಲಿ ಲಸಿಕೆ ನೀಡಬೇಕು ಎಲ್ಲ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಲಿದೆ. ಈಗಲೇ ಆ ಬಗ್ಗೆ ಮಾತನಾಡಿ ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ. ಲಸಿಕೆ ನೀಡಿಕೆ ಸಂಬಂಧ ಎಲ್ಲ ಸಿದ್ದತೆ ನಡೆದಿದ್ದು, ಯಾವುದೇ ಗೊಂದಲಗಳು ಇಲ್ಲ ಎಂದರು.
ರಾಜ್ಯದಲ್ಲಿ ೨೩೫ ಕಡೆ ಕೊರೊನಾ ಲಸಿಕೆ ನೀಡಲು ಸಿದ್ದತೆ ಮಾಡಿದ್ದೇವೆ. ಲಸಿಕೆ ಬಂದ ನಂತರ ಅವುಗಳನ್ನು ಈ ಕೇಂದ್ರಗಳಿಗೆ ಸರಬರಾಜು ಮಾಡಲು ಎಲ್ಲ ವ್ಯವಸ್ಥೆಗಳು ಆಗಿವೆ ಎಂದರು.
ಹಕ್ಕಿಜ್ವರ ಇಲ್ಲ
ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿಲ್ಲ. ಸತ್ತಿರುವ ಎಲ್ಲ ಕೋಳಿ, ಪಕ್ಷಿಗಳ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿದ್ದೇವೆ. ಎಲ್ಲ ವರದಿಗಳು ನೆಗೆಟಿವ್ ಬಂದಿದ್ದು, ರಾಜ್ಯದಲ್ಲಿ ಹಕ್ಕಿಜ್ವರ ಇಲ್ಲ ಎಂದರು.