ರಾಜ್ಯದ 13 ಕ್ಷೇತ್ರಗಳಲ್ಲಿ ಎಸ್ ಯು ಸಿ ಐ ಸ್ಪರ್ಧೆ: ಸೋಮಶೇಖರ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.03: ಜಿಲ್ಲೆಯ ಬಳ್ಳಾರಿ ನಗರ ಮತ್ತು ಕಂಪ್ಲಿ ಕ್ಷೇತ್ರ ಸೇರಿದಂತೆ ರಾಜ್ಯದ 13 ಕ್ಷೇತ್ರಗಳಲ್ಲಿ  ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷ ಸ್ಪರ್ಧೆ ಮಾಡಲಿದೆಂದು ಪಕ್ಷದ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಕೆ.ಸೋಮಶೇಖರ್ ಪ್ರಕಟಿಸಿದ್ದಾರೆ.
ಅವರು ಇಂದು ನಗರದಲ್ಲಿನ ಬಳ್ಳಾರಿ ಪತ್ರಕರ್ತರ ಒಕ್ಕೂಟದಲ್ಲಿ ಸುದ್ದಿಗೋಷ್ಟಿ ನಡೆಸಿ ಈ ವಿಷಯ ತಿಳಿಸಿದರು. ಬಳ್ಳಾರಿ ಕ್ಷೇತ್ರದಿಂದ ಆರ್.ಸೋಮಶೇಖರ ಗೌಡ, ಕಂಪ್ಲಿ ಕ್ಷೇತ್ರದಿಂದ ಎ.ದೇವದಾಸ್, ರಾಜಾಜಿನಗರದಿಂದ ರಮಾ ಟಿ.ಸಿ, ರಾಜರಾಜೇಶ್ವರಿ ನಗರದಿಂದ ವೇಣುಗೋಪಾಲಭಟ್, ದಾವಣಗೆರೆ ದಕ್ಷಿಣದಿಂದ ಭಾರತಿ, ಧಾರವಾಡ ಗ್ರಾಮೀಣದಿಂದ ಮಧುಲತಾಗೌಡರ್, ಕಲ್ಬುರ್ಗಿ ದಕ್ಷಿಣದಿಂದ ಮಹೇಶ್ ಎಸ್.ಬಿ. ಕಲ್ಬುರ್ಗಿ ಗ್ರಾಮೀಣದಿಂದ ಗಣಪತ್ ರಾವ್ ಮಾನೆ, ಮೈಸೂರಿನ ಕೃಷ್ಣರಾಜದಿಂದ ಸಂದ್ಯಾ ಪಿ.ಎಸ್.ರಾಯಚೂರು ನಗರದಿಂದಎನ್.ಎಸ್.ವೀರೇಶ್, ತುಮಕೂರು ನಗರ ಕ್ಷೇತ್ರದಿಂದ ಎಸ್.ಎನ್.ಸ್ವಾಮಿ, ವಿಜಯಪುರ ನಗರದಿಂದ ಮಲ್ಲಿಕಾರ್ಜುನ ತಳವಾರ್, ಯಾದಗಿರಿಯಿಂದ ಕೆ.ಸೋಮಶೇಖರ ಅವರನ್ನು ಕಣಕ್ಕಿಳಿಸಲಿದೆ. ನಾವು ಸ್ಪರ್ಧೆ ಮಾಡದ ಕಡೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಬಿಟ್ಟು
ಜನಪರ ಹೋರಾಟದಲ್ಲಿ ತೊಡಗಿಕೊಂಡಿರುವ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಿದೆಂದರು.
ಎ. 13 ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ, ಎ15 ರಂದು ಕಂಪ್ಲಿ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆಂದರು.
ಡಬಲ್ ಇಂಜಿನ್ ನ  ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ಹಾಗೂ ಕಾರ್ಪೋರೇಟ್ ಮಾಲೀಕರ ಪರವಾದ ನೀತಿಗಳ ವಿರುದ್ಧ ನಿರಂತರ ಹೋರಾಟ ಬೆಳೆಸುತ್ತಿರುವ ಎಸ್‌.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷವು,  ಚುನಾವಣೆಯನ್ನೂ ಕೂಡ ಒಂದು ಹೋರಾಟದ ಕಣವಾಗಿ ಪರಿಗಣಿಸಿ ಸ್ಪರ್ಧೆ ಮಾಡುತ್ತಿದೆ. ಮಿತಿ ಮೀರಿದ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳು, ಕಾರ್ಮಿಕರ ಹಕ್ಕುಗಳ ದಮನ, ದುಬಾರಿ ಶಿಕ್ಷಣ ಆರೋಗ್ಯ, ನಗರಗಳಲ್ಲಿ ಮೂಲಸೌಕರ್ಯದ ಕೊರತೆ, ತೀವ್ರತರ ಆರ್ಥಿಕ ಅಸಮಾನತೆ ಇಂತಹ ಜ್ವಲಂತ ಸಮಸ್ಯೆಗಳನ್ನು ಚುನಾವಣಾ ವಿಷಯಗಳನ್ನಾಗಿ ಮಾಡಲಿದೆ. ಅಷ್ಟೇ ಅಲ್ಲದೆ ಜನರ ಕಡೆಗಣಿಸಿ ಕಾರ್ಪೋರೇಟ್ ಮಾಲೀಕರ ಕೈಗೊಂಬೆಯಾಗಿರುವ ಬಿಜೆಪಿ, ಕಾಂಗ್ರೆಸ್‌ ಹಾಗೂ ಇನ್ನಿತರ ಪಕ್ಷಗಳ ನೈಜ ಮುಖವಾಡವನ್ನು, ಈ ಚುನಾವಣಾ ಸಂದರ್ಭದಲ್ಲಿ ಜನರ ಮುಂದೆ ಇಟ್ಟು ಮತ ಕೇಳಲಿದೆಂದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರುಗಳಾದ ರಾಧಾಕೃಷ್ಣ ಉಪಾಧ್ಯ, ನಾಗಲಕ್ಷ್ಮಿ, ಮಂಜುಳ, ಡಾ.ಪ್ರಮೋದ್, ಗೋವಿಂದ ಅಭ್ಯರ್ಥಿಗಳಾದ ಆರ್.ಸೋಮಶೇಖರಗೌಡ, ಎ.ದೇವದಾಸ್ ಇದ್ದರು.