ರಾಜ್ಯದ ೨೦ ಕಡೆಗಳಲ್ಲಿ ಮೋದಿ ರ್‍ಯಾಲಿ

ಗೆಲುವಿಗೆ ಬಿಜೆಪಿ ತಂತ್ರ
ನವದೆಹಲಿ,ಏ.೨:ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಅಬ್ಬರದ ಪ್ರಚಾರಕ್ಕೆ ವೇದಿಕೆ ಸಿದ್ಧಪಡಿಸಿದೆ. ಅದರಲ್ಲೂ ಪ್ರಧಾನಿ ನರೇಂದ್ರಮೋದಿ ಅವರ ವರ್ಚಸ್ಸನ್ನು ಬಳಸಿಕೊಂಡು ರಾಜ್ಯದ ೨೦ ಕಡೆಗಳಲ್ಲಿ ಬೃಹತ್ ಚುನಾವಣಾ ಸಮಾವೇಶವನ್ನು ನಡೆಸಲು ಬಿಜೆಪಿ ವರಿಷ್ಠ ಮಂಡಳಿ ಮುಂದಾಗಿದೆ.ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಪ್ರಬಲ ಹೋರಾಟ ನಡೆಸುವ ನಿಟ್ಟಿನಲ್ಲಿ ಪ್ರಧಾನಿ ಅವರು ರಾಜ್ಯದಲ್ಲಿ ಸರಣಿ ರ್‍ಯಾಲಿಗಳನ್ನು ನಡೆಸುವ ಮೂಲಕ ಮತದಾರರ ಓಲೈಸಲಿದ್ದಾರೆ.ಚುನಾವಣೆ ಘೋಷಣೆಗೂ ಮುನ್ನ ಮೋದಿ ಅವರು ಹಲವು ಬಾರಿ ರಾಜ್ಯಕ್ಕೆ ಆಗಮಿಸಿದ ವೇಳೆ ರೋಡ್ ಶೋ ನಡೆಸಿ ಮತದಾರರ ಮನಗೆಲ್ಲಲು ಕಸರತ್ತು ನಡೆಸಿದ್ದರು. ಈಗ ಚುನಾವಣಾ ಘೋಷಣೆಯಾದ ಬಳಿಕ ೨೦ ರ್‍ಯಾಲಿಗಳನ್ನು ಸಂಘಟಿಸಲು ಬಿಜೆಪಿ ಮುಂದಾಗಿದೆ.
ರಾಜ್ಯದ ೬ ಪ್ರಾಂತ್ಯಗಳಲ್ಲಿ ಕನಿಷ್ಠ ೩ ರ್‍ಯಾಲಿಗಳನ್ನು ಸಂಘಟಿಸಲು ನಿರ್ಧರಿಸಿರುವ ಬಿಜೆಪಿ, ಹೈದ್ರಾಬಾದ್-ಕರ್ನಾಟಕದಲ್ಲಿ ೪೦ ವಿಧಾನಸಭಾ ಕ್ಷೇತ್ರಗಳಿದ್ದು, ಈ ಭಾಗಗಳಲ್ಲಿ ಹೆಚ್ಚಿನ ರ್‍ಯಾಲಿಗಳನ್ನು ನಡೆಸಲಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧಿಪತ್ಯವಿರುವ ಈ ಭಾಗಗಳಲ್ಲಿ ಕಳೆದ ಬಾರಿ ಗಳಿಸಿದ್ದ ೧೫ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಭ್ರಷ್ಟಾಚಾರದ ಆರೋಪಗಳಿಗೆ ಗುರಿಯಾಗಿದ್ದು, ಇದನ್ನೇ ವಿಪಕ್ಷಗಳು ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಈ ಆರೋಪಗಳಿಗೆ ತಿರುಗೇಟು ನೀಡಲು ಮೋದಿ ಅವರ ರ್‍ಯಾಲಿಯನ್ನು ಸಂಘಟಿಸಲು ಬಿಜೆಪಿ ಮುಂದಾಗಿದೆ.
ಈಗಾಗಲೇ ಮೋದಿ ಅವರು ಹುಬ್ಬಳ್ಳಿ, ಮಂಡ್ಯ ಸೇರಿದಂತೆ ೭ ಕಡೆಗಳಲ್ಲಿ ರ್‍ಯಾಲಿ ನಡೆಸಿ ಶಕ್ತ ಪ್ರದರ್ಶನ ನಡೆಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿ ಅವರನ್ನು ಪ್ರಚಾರಕ್ಕೆ ಕರೆತಂದು ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸಿದೆ.