ರಾಜ್ಯದ ೧೦೦೪೨ ವಿಶೇಷಚೇತನರಿಗೆ ಧರ್ಮಸ್ಥಳದಿಂದ ಸಲಕರಣೆ ವಿತರಣೆ

ಧರ್ಮಸ್ಥಳ, ಮೇ ೫- ೨೦೧೯ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಮಹಾಮಸ್ತಕಾಭಿಷೇಕದ ಸವಿನೆನಪಿಗಾಗಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪ್ರಾರಂಭಿಸಿದ ಜನಮಂಗಲ ಕಾರ್ಯಕ್ರಮದಡಿಯಲ್ಲಿ ರಾಜ್ಯಾದ್ಯಂತ ಇದುವರೆಗೆ ೧೦,೦೪೨ ವಿಶೇಷ ಚೇತನರಿಗೆ ವಿವಿಧ ರೀತಿಯ ಸಲಕರಣೆಗಳನ್ನು ಉಚಿತವಾಗಿ ಒದಗಿಸಿದ್ದು, ಈ ಕಾರ್ಯಕ್ರಮಕ್ಕೆ ಇದುವರೆಗೆ ರೂ. ೨.೩೦. ಕೋಟಿ ಮೊತ್ತವನ್ನು ವಿನಿಯೋಗಿಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಪ್ರಸ್ತುತ ವರ್ಷವೂ ರೂ. ೧.೫೦ ಕೋಟಿ ಮೊತ್ತವನ್ನು ಮೀಸಲಾಗಿಡಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಲ್.ಹೆಚ್. ಮಂಜುನಾಥ್ ತಿಳಿಸಿರುತ್ತಾರೆ.

ಅಂಗವಿಕಲರಿಗೆ ನೀಡುವ ಇಂತಹ ಸಲಕರಣೆಗಳಿಂದ ದೈನಂದಿನ ಕೆಲಸ ಕಾರ್ಯಗಳಿಗೆ ಕನಿಷ್ಠ ಸಹಾಯವಾದರೂ ಆದಲ್ಲಿ ಅವರ ಬದುಕಿನಲ್ಲಿಯೂ ಬದಲಾವಣೆಯನ್ನು ತರಲು ಸಾಧ್ಯವಾದಿತು ಎಂಬುವುದು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಆಶಯವಾಗಿದೆ. ಅಂಗವಿಕಲರ ಪೋಷಕರು ಎಷ್ಟೋ ಸಂದರ್ಭದಲ್ಲಿ ಖಿನ್ನತೆಗೊಳಗಾಗುವುದೂ ಇದೆ. ಇಂತಹ ಸಂದರ್ಭದಲ್ಲಿ ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಬದುಕುವ ಆತ್ಮವಿಶ್ವಾಸವನ್ನು ತುಂಬಿಸುವ ಅಗತ್ಯತೆ ಇದೆ. ಇದಕ್ಕಾಗಿ ಸಮಾಜದ ಸಹಾಯಹಸ್ತದ ನೆರವಿನ ಅನಿವಾರ್ಯತೆ ಇದೆ. ಇದಕ್ಕಾಗಿಯೇ ಜನಮಂಗಲವೆನ್ನುವ ಕಾರ್ಯಕ್ರಮವನ್ನು ಜಾರಿಗೆ ತಂದರು.

ಹಾಸಿಗೆ ಹಿಡಿದು ಮಲಗಿದ್ದಲ್ಲಿಯೇ ಇದ್ದವರಿಗೆ ಹುಣ್ಣು (ಬೆಡ್‌ಸೋರ್) ಆಗದಂತೆ ನೀರಹಾಸಿಗೆ (ವಾಟರ್ ಬೆಡ್),  ಅಪಘಾತಕ್ಕೊಳಗಾಗಿ ಯಾ ರೋಗಿಗಳಾಗಿ ಅಂಗವಿಕಲರಾಗಿದ್ದು, ನಡೆದಾಡಲು ಸಾಧ್ಯವಿಲ್ಲದವರಿಗೆ ಹೊರಗಡೆ ಓಡಾಡಲು ಗಾಲಿಕುರ್ಚಿ, (ವೀಲ್ ಚಯರ್) ಮತ್ತು ಹಾಸಿಗೆ ಹಿಡಿದ ರೋಗಿಗಳಿಗೆ ಸ್ನಾನಕ್ಕೆ, ಶೌಚಕ್ಕೆ ಹೋಗಲು ಗಾಲಿಕುರ್ಚಿ, (ಕಮೋಡ್ ವೀಲ್ ಚಯರ್) ಅಪಘಾತಗಳಾಗಿ ವಿಕಲಾಂಗರಾಗಿ ಓಡಾಡುತ್ತಿರುವವರಿಗೆ ಕಂಕುಳಲ್ಲಿ ಇಟ್ಟುಕೊಳ್ಳಲು ಅನುಕೂಲವಾಗುವಂತೆ ಊರುಗೋಲು (ಆಕ್ಸಿಲರಿ ಕ್ರಚಸ್), ವಯಸ್ಕರಾಗಿದ್ದು ಸ್ಟ್ರೋಕ್, ಪ್ಯಾರಾಲಿಸಿಸ್ ಮುಂತಾದ ರೋಗಗಳಿಗೆ ತುತ್ತಾಗಿರುವವರಿಗೆ ನಡೆದಾಡಲು ಅನುಕೂಲವಾಗುವಂತೆ ನಡುಗೋಲು(ಯು ಶೇಪ್ ವಾಕರ್), ವಯಸ್ಸಾಗಿದ್ದು ಯಾ ಅಪಘಾತವಾಗಿ ನಡೆದಾಡಲು ಕಷ್ಟವಾದವರಿಗೆ ನಡೆದಾಡಲು ಅನುಕೂಲವಾಗುವಂತೆ ಏಕಕಾಲಿನ ಕೈಗೋಲು (ಸಿಂಗಲ್ ಲೆಗ್ ವಾಕಿಂಗ್ ಸ್ಟಿಕ್) ಹಾಗೂ ಮೂರುಕಾಲಿನ ಕೈಗೋಲು(ತ್ರಿ ಲೆಗ್ ವಾಕಿಂಗ್ ಸ್ಟಿಕ್) ಮೊದಲಾದ  ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಲ್.ಹೆಚ್. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.