ರಾಜ್ಯದ ಹಿತಾಸಕ್ತಿ ಕಾಪಾಡಲುಕಾಂಗ್ರೆಸ್ ವಿಫಲ

ಬೆಂಗಳೂರು, ಮೇ ೨೨- ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡಲು ರಾಜ್ಯದ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ದೂರಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ಬರಗಾಲದ ನಡುವೆಯೂ ಮೇ ತಿಂಗಳಿನಲ್ಲಿ ಮತ್ತೊಮ್ಮೆ ತಮಿಳುನಾಡಿಗೆ ೨.೫ ಟಿಎಂಸಿ ನೀರು ಬಿಡಲು ರಾಜ್ಯ ಸರ್ಕಾರ ಶರಣಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ರಾಜ್ಯದ ಪರವಾಗಿ ಸಮರ್ಥವಾದ ಮಂಡಿಸಲು ಸಿದ್ಧರಾಗಿ ಎಂದು ಎಷ್ಟು ಬಾರಿ ಎಚ್ಚರಿಸಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ಲಕ್ಷ್ಯ ಮಾಡುತ್ತಾ ಕಾಲಹರಣ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ. ತಮಿಳುನಾಡಿಗೆ ೨.೫ ಟಿಎಂಸಿ ನೀರು ಬಿಡಲು ಶರಣಾಗುವ ಮೂಲಕ ಈಗ ಮತ್ತೊಮ್ಮೆ ಕಾವೇರಿಯ ಮಡಿಲನ್ನು ಬರಿದು ಮಾಡಿ ಕನ್ನಡಿಗರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ್ರೋಹ ಬಗೆದಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಹಾಲು ಉತ್ಪಾದಕರಿಗೆ ಹಣ ಬಾಕಿ ಟೀಕೆ
ಹಾಲು ಉತ್ಪಾದಕರಿಗೆ ೭೦೩ ಕೋಟಿ ರೂ. ಪ್ರೋತ್ಸಾಹ ಧನವನ್ನು ಕಳೆದ ೮ ತಿಂಗಳಿನಿಂದ ಈ ಸರ್ಕಾರ ಉಳಿಸಿಕೊಂಡಿದೆ. ಇದು ರೈತ ವಿರೋಧಿ ಸರ್ಕಾರ ಎಂದು ಅವರು ಟೀಕಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಂದಿನಿ ಹೆಸರಿನಲ್ಲಿ ರಾಜಕೀಯ ಮಾಡಿ ಈಗ ಅಮೃತದ ಹಾಲು ಕೊಡುವ ರೈತರ ಬಾಳಲ್ಲಿ ವಿಷ ಹಿಂಡುವ ಪಾಪದ ಕೆಲಸ ಮಾಡುತ್ತಿದ್ದಿರಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಇದೇನಾ ನೀವು ನಮ್ಮ ನಂದಿನಿ ಬ್ರಾಂಡ್ ಉಳಿಸುವ ಪರಿ ಎಂದು ಪ್ರಶ್ನಿಸಿದ್ದಾರೆ.
ನಂದಿನಿ ಸಂಸ್ಥೆಯ ಕೋಟ್ಯಂತರ ರೂ. ಬಳಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪ್ರಾಯೋಜಕತ್ವ ಪಡೆಯಲು ಸರ್ಕಾರದ ಬಳಿ ಹಣವಿದೆ. ಆದರೆ ನಂದಿನಿ ಬ್ರ್ಯಾಂಡ್ ಕಟ್ಟಿ ಬೆಳೆಸಿ, ಪೋಷಿಸುತ್ತಿರುವ ಹೈನುಗಾರರಿಗೆ ಸಮಯಕ್ಕೆ ಸರಿಯಾಗಿ ಪ್ರೋತ್ಸಾಹ ಧನ ನೀಡಲು ತಮ್ಮ ಬಳಿ ಹಣವಿಲ್ಲವೆ ಸಿದ್ಧರಾಮಯ್ಯನವರೇ, ನಾಡಿನ ರೈತರ ಶಾಪ ತಮಗೆ ತಟ್ಟದೆ ಇರದು ಎಂದು ಅಶೋಕ್ ಟ್ವೀಟ್‌ನಲ್ಲಿ ಹರಿಹಾಯ್ದಿದ್ದಾರೆ.