ಕಾವೇರಿ ಸಂಸದರ ಸಭೆ
(ಸಂಜೆವಾಣಿ ಪ್ರತಿನಿಧಿಯಿಂದ)
ನವದೆಹಲಿ,ಸೆ.೨೦:ನಾಡು, ನುಡಿ. ಜಲ. ಭಾಷೆ. ಸಂಸ್ಕೃತಿ ಕಾಪಾಡುವ ವಿಚಾರದಲ್ಲಿ ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ನಾವೆಲ್ಲ ಒಂದು ಧ್ವನಿಯಾಗಿ ಗಟ್ಟಿಯಾಗಿ ನಿಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಸಂಬಂಧ ದೆಹಲಿಯಲ್ಲಿ ನಡೆದ ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಸಂಸತ್ ಸದಸ್ಯರ ಸಭೆಯಲ್ಲಿ ಆರಂಭಿಕವಾಗಿ ಮಾತನಾಡಿದ ಮುಖ್ಯಮಂತ್ರಿಗಳು, ಸಂಕಷ್ಟಸೂತ್ರ ಸಿದ್ಧವಾಗದಿರುವುದರಿಂದ ಕಾವೇರಿ ನೀರು ಹಂಚಿಕೆ ರಾಜ್ಯಕ್ಕೆ ಕ್ಲಿಷ್ಟಕರವಾಗಿದೆ ಎಂದರು.ತಮಿಳುನಾಡಿಗೆ ನೀರು ಬಿಡಬಾರದು ಎಂಬ ಪ್ರಶ್ನೆ ಅಲ್ಲ, ಬಿಡಲು ನಮ್ಮಲ್ಲಿ ನೀರಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿ ಆಗಸ್ಟ್ ಬಳಿಕ ನಮಗೆ ಮಳೆ ಬರಲ್ಲ, ತಮಿಳುನಾಡಿಗೆ ಆಗಸ್ಟ್ ಬಳಿಕ ಮಳೆ ಬರುತ್ತದೆ. ಅಲ್ಲಿ ಅಂತರ್ಜಲ ಕೂಡ ಹೆಚ್ಚಿದೆ. ತಮಿಳುನಾಡಿಗಿಂತ ನಾವು ಹೆಚ್ಚು ಸಂಕಷ್ಟದಲ್ಲಿದ್ದೇವೆ ಎಂದರು.ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ನಮ್ಮ ಕಾನೂನು ತಂಡ ಹಾಗೂ ತಜ್ಷರು ಹಾಗೂ ಅಧಿಕಾರಿಗಳ ತಂಡ ಕಾವೇರಿ ನೀರು ನಿರ್ವಹಣಾ ಸಮಿತಿ ಎದುರು ಸಮರ್ಥವಾಗಿ ಮಂಡಿಸಿದ್ದಾರೆ. ಈಗಾಗಲೇ ನಾವು ಕೇಂದ್ರ ನೀರಾವರಿ ಸಚಿವರಿಗೆ ಎರಡು ಬಾರಿ ಪತ್ರ ಬರೆದು ಪರಿಸ್ಥಿತಿಯನ್ನು ವಿವರಿಸಿದ್ದೇವೆ. ಸರ್ವಪಕ್ಷ ನಿಯೋಗ ಭೇಟಿಗೆ ಪ್ರಧಾನಿಯವರ ಸಮಯವನ್ನು ಕೇಳಿದ್ದೇವೆ ಎಂದರು.ಕಾವೇರಿ ವಿಚಾರದಲ್ಲಿ ಮುಂದೆ ನಾವಿಡಬೇಕಾದ ಹೆಜ್ಜೆಗಳ ಕುರಿತು ವೈಜ್ಞಾನಿಕ ಸಂಗತಿಗಳ ಆಧಾರದಲ್ಲಿ ಚರ್ಚಿಸಬೇಕು ಎಂದು ಮನವಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಸುಪ್ರೀಂಕೋರ್ಟ್ ಆದೇಶದ ಪ್ರಕಾರ ತಮಿಳುನಾಡಿಗೆ ೧೦೮.೪ ಟಿಎಂಸಿ ನೀರನ್ನು ನಾವು ಬಿಡಬೇಕಿತ್ತು. ಬಿಟ್ಟಿರುವುದು ೩೯.೮ ಟಿಎಂಸಿ ನೀರು ಮಾತ್ರ. ಕಾರಣ ನಮ್ಮಲ್ಲೇ ನೀರು ಇಲ್ಲ, ನಮಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದರು.
ಡಿಕೆಶಿ ಮಾತು
ಇದೇ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ರಾಜ್ಯದ ಹಿತಾಸಕ್ತಿ ಬಂದಾಗ ರಾಜಕಾರಣ ಬೇಡ ಎಲ್ಲ ಸಂಸದರು ಒಟ್ಟಾಗಿ ರಾಜ್ಯದ ಪರವಾಗಿ ಕೇಂದ್ರ ಸಚಿವರೆದುರು ಹೇಳಿಕೆ ಮಂಡಿಸಬೇಕು, ನಮ್ಮ ಸಮಸ್ಯೆ ಬಗೆಹರಿಸಿ ರಾಜ್ಯದ ಹಿತಾಸಕ್ತಿ ಕಾಪಾಡಿಕೊಳ್ಳುವುದಷ್ಟೇ ಮುಖ್ಯ. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಈ ಸಭೆಯಲ್ಲಿ ಕೇಂದ್ರ ಸಚಿವರುಗಳಾದ ಪ್ರಲ್ಹಾದ್‌ಜೋಷಿ, ಶೋಭಾಕರಂದ್ಲಾಜೆ, ಭಗವಂತಕೂಬಾ, ನಾರಾಯಣಸ್ವಾಮಿ, ರಾಜೀವ್‌ಚಂದ್ರಶೇಖರ್ ಸೇರಿದಂತೆ ರಾಜ್ಯದ ಎಲ್ಲ ಸಂಸದರು ಪಾಲ್ಗೊಂಡಿದ್ದರು.
ರಾಜಕಾರಣ ಪಕ್ಕಕ್ಕಿಟ್ಟು ಒಗ್ಗಟ್ಟಿನ ಧ್ವನಿಯಾಗಿ.
- ನಾಡು, ನುಡಿ, ಜಲ ವಿಚಾರದಲ್ಲಿ ಗಟ್ಟಿಯಾಗಿ ನಿಲ್ಲಿ.
- ಕಾವೇರಿ ವಿವಾದ ರಾಜ್ಯಕ್ಕೆ ಕ್ಲಿಷ್ಟ ಪರಿಸ್ಥಿತಿ.
- ನಮಗೇ ನೀರಿಲ್ಲ, ತಮಿಳುನಾಡಿಗೆ ನೀರು ಬಿಡುವುದು ಎಲ್ಲಿ.
- ಕಾನೂನು ತಜ್ಞರಿಂದ ಪ್ರಾಧಿಕಾರದ ಮುಂದೆ ಸಮರ್ಥ ವಾದ ಮಂಡನೆ.
- ಕೇಂದ್ರ ಸಂಸದರ ಸಭೆಯಲ್ಲಿ ಸಿದ್ದು ಹೇಳಿಕೆ.

ಕರ್ನಾಟಕ ಸಂಸತ್ ಸದಸ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.P. ಶಿವಕುಮಾರ್ ರವರು ದೆಹಲಿಯ ತಾಜ್ ಹೋಟೆಲ್ ನಲ್ಲಿ ಇಂದು ಬೆಳಿಗ್ಗೆ ಉಪಹಾರ ಕೂಟದಲ್ಲಿ ಭಾಗವಹಿಸಿದ್ದರು.
ಕಾವೇರಿ: ಪ್ರಧಾನಿ ಮಧ್ಯಪ್ರವೇಶಕ್ಕೆ ರಾಜ್ಯದ ಮನವಿ
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಿಯವರ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದೇವೆ. ಹಾಗೆಯೇ ತಮಿಳುನಾಡಿಗೆ ನಈರು ಬಿಡಬೇಕು ಎನ್ನುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕೆ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆಗೆ ಮನವಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಪರಿಷ್ಥಿತಿಯನ್ನು ನಿರ್ವಹಿಸಲು ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ದೆಹಲಿಯಲ್ಲಿಂದು ರಾಜ್ಯಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಸಂಸದರ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಎರಡೂ ರಾಜ್ಯದವರನ್ನು ಕರೆದು ಅಹವಾಲು ಕೇಳುವ ಅಧಿಕಾರ ವ್ಯಾಪ್ತಿ ಪ್ರಧಾನಿಯವರಿಗಿದೆ. ಹಾಗಾಗಿ ನಾವು ಪ್ರಧಾನಿಯವರ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದೇವೆ. ಸಂಜೆ ಕೇಂದ್ರ ಜಲ ಸಂಪನ್ಮೂಲ ಸಚಿವರ ಸಭೆ ಬಳಿಕ ಮುಂದಿನ ತೀರ್ಮಾನ ಮಾಡಲಾಗುವುದು ಎಂದರು.ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ ಕಾವೇರಿ ಪ್ರಾಧಿಕಾರದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಸುಪ್ರೀಂಕೋರ್ಟ್‌ನಲ್ಲಿ ಮನವಿ ಮಾಡುತ್ತೇವೆ ಎಂದು ಹೇಳಿದರು. ನಾಳೆಯೇ ಸುಪ್ರೀಂಕೋರ್ಟಿಗೆ ಅರ್ಜಿ ಹಾಕಿ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವುದಾಗಿಯೂ ಹೇಳಿದರು.
ಇಂದಿನ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಹೊರತುಪಡಿಸಿ ರಾಜ್ಯದಿಂದ ಆಯ್ಕಯಾದ ಸಚಿವರು ಕೇಂದ್ರ ಸಚಿವರು ಸಭೆಯಲ್ಲಿ ಹಾಜರಿದ್ದರು ನಿರ್ಮಲಾಸೀತಾರಾಮನ್ ಅವರು ಅನ್ಯಕಾರ್ಯ ನಿಮಿತ್ತ ಸಭೆಯಲ್ಲಿ ಭಾಗವಹಿಸಿಲ್ಲ ಎಂದರು.
ನಿಯೋಗ ರಾಜ್ಯದಲ್ಲಿ ೧೯೫ ತಾಲ್ಲೂಕುಗಳನ್ನು ಬರಪೀಡಿತ ಎಂದು ಗುರುತಿಸಿದ್ದೇವೆ. ೧೨೩ ವರ್ಷಗಳಲ್ಲೇ ಆಗಸ್ಟ್ ತಿಂಗಳಿನಲ್ಲಿ ಅತೀ ಕಡಿಮೆ ಮಳೆ ದಾಖಲಾಗಿದೆ. ನಮಗೆ ಕುಡಿಯುವ ನೀರು, ಬೆಳೆ ರಕ್ಷಣೆ, ಕೈಗಾರಿಕೆಗೂ ನೀರಿಲ್ಲ. ನಾವೇ ಬಹಳ ಕಷ್ಟದಲ್ಲಿದ್ದೇವೆ ಎಂದು ಹೇಳಿದರು.
ಒಟ್ಟು ಮೂರು ಬಾರಿ ಸರ್ವಪಕ್ಷ ಸಭೆ ನಡೆಸಿದ್ದೇವೆ. ೫ ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿಲ್ಲ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆಯೂ ಮನವಿ ಸಲ್ಲಿಸಿದ್ದೇವೆ. ತಮಿಳುನಾಡು ವಾದ ವಿರೋಧಿಸಿ ಸುಪ್ರೀಂಕೋರ್ಟ್‌ನಲ್ಲಿ ನಮ್ಮ ತಕಾರರು ಸಲ್ಲಿಸಿದ್ದೇವೆ ಎಂದರು.