(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೨೧:ಉದ್ಯಾನನಗರಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿ ಸಿಸಿಬಿಗೆ ಸಿಕ್ಕಿ ಬಿದ್ದಿರುವ ೫ ಮಂದಿ ಶಂಕಿತ ಉಗ್ರಗಾಮಿಗಳ ಹೆಜ್ಜೆ ಜಾಡನ್ನು ಬೆನ್ನತ್ತಿರುವ ಸಿಸಿಬಿ ಪೊಲೀಸರಿಗೆ ಬಗೆದಷ್ಟು ಮಾಹಿತಿಗಳು ಲಭ್ಯವಾಗುತ್ತಿವೆ.
ಈ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ರಾಜ್ಯದ ಹಲವೆಡೆ ಹಿಂದೂ-ಮುಸ್ಲಿಂ ಗಲಭೆ ನಡೆಯುವ ಸ್ಥಳಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಶಂಕಿತ ಉಗ್ರರ ಪೈಕಿ ಜುನೈದ್ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದು, ಈತ ಆಫ್ಘಾನಿಸ್ತಾನದ ಗಡಿ ಭಾಗದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹೆಬ್ಬಾಳದ ಸುಲ್ತಾನ್‌ಪಾಳ್ಯದಲ್ಲಿ ಕುರಿ ವ್ಯಾಪಾರಿಯಾಗಿದ್ದ ಜುನೈದ್ ಎಲ್‌ಇಟಿ ಉಗ್ರರೊಂದಿಗೆ ನೇರ ಸಂಪರ್ಕ ಹೊಂದಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡಿಟ್ಟುಕೊಂಡು ಯಾರಿಗೂ ಅನುಮಾನ ಬಾರದಂತೆ ಶಂಕಿತ ಉಗ್ರರು ಸ್ಫೋಟಕ್ಕೆ ಸಂಚು ರೂಪಿಸಲು ಸಿದ್ಧತೆ ಮಾಡಿಕೊಂಡಿದ್ದರು. ರಾಜ್ಯದಲ್ಲಿ ಆಂiiಕಟ್ಟಿನ ಭಾಗಗಳನ್ನು ಗುರಿಯಾಗಿರಿಸಿಕೊಂಡು ಸ್ಫೋಟ ನಡೆಸಲು ೬ ತಿಂಗಳುಗಳಿಂದ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಟ್ಟುಕೊಂಡಿದ್ದರು.
ಸ್ಫೋಟ ಮತ್ತು ಗನ್ ದಾಳಿ ನಡೆಸಲು ಶಂಕಿತ ಉಗ್ರರು ಗನ್ ಮತ್ತು ಗ್ರನೇಟ್ ಬಳಕೆ ಬಗ್ಗೆಯೂ ತರಬೇತಿ ಪಡೆದುಕೊಂಡಿದ್ದರು. ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಿ ಅಶಾಂತಿ ಉಂಟು ಮಾಡಲು ತಯಾರಿ ಮಾಡಿಕೊಂಡಿದ್ದರು.
ಬೆಂಗಳೂರು, ಮಂಗಳೂರು, ಶಿವಮೊಗ್ಗ, ಉಡುಪಿ, ಗುಲ್ಬರ್ಗ, ಹುಬ್ಬಳ್ಳಿಯ ಪ್ರದೇಶಗಳಲ್ಲಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಬಗ್ಗೆಯೂ ಈ ಶಂಕಿತರು ವಿಚಾರಣೆ ವೇಳೆ ಸಿಸಿಬಿ ಪೊಲೀಸರ ಮುಂದೆ ಬಹಿರಂಗಪಡಿಸಿದ್ದಾರೆ.
ದಾಳಿ ನಡೆಸುವ ಸಲುವಾಗಿಯೇ ಶಂಕಿತರ ಪ್ರತಿಯೊಬ್ಬರ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಶೇಖರಣೆಗೂ ಪಿತೂರಿ ನಡೆಸಿದ್ದರು. ಅಲ್ಲದೆ ರಾಜ್ಯದ ಹಲವು ಭಾಗಗಳಿಗೆ ಬಳಕೆ ಮಾಡಲು ಬಾಂಬ್, ಪಿಸ್ತೂಲು, ಬುಲೆಟ್‌ಗಳೂ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಎಲ್ಲ ಆಯಾಮಗಳಿಂದಲೂ ಸಿಸಿಬಿ ತನಿಖೆ ನಡೆಸುತ್ತಿದೆ.
ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಈ ಐವರು ಶಂಕಿತರು ಮತಾಂತರಕ್ಕೂ ಮುಂದಾಗಿದ್ದರು ಎಂಬ ಆಘಾತಕಾರಿ ಅಂಶವೂ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಆಫ್ಘಾನ್‌ನಲ್ಲಿ ಜುನೈದ್
ಶಂಕಿತ ಉಗ್ರರ ಪೈಕಿ ಮೊಹ್ಮದ್ ಜುನೈದ್ ಆಘ್ಫಾನ್ ಗಡಿಯಲ್ಲಿ ಅಡಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈತ ಒಂದು ವರ್ಷದ ಹಿಂದೆಯೇ ವಿದೇಶಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಕುರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಜುನೈದ್ ೨೦೧೭ ರಲ್ಲಿ ಜೆಸಿ ನಗರದ ನೂರ್‌ಆಹ್ಮದ್ ಜತೆ ಜಗಳ ಮಾಡಿಕೊಂಡಿದ್ದನು. ಹಣಕಾಸಿನ ವಿಚಾರವಾಗಿ ಮನೆಗೆ ಬಂದು ಪತ್ನಿ ಮುಂದೆಯೇ ಜುನೈದ್‌ನ ಅಂಗಿಬಿಚ್ಚಿ ಹಲ್ಲೆ ಮಾಡಿದ್ದನು.
ಅವಮಾನದ ಪ್ರತೀಕಾರವಾಗಿ ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಅಹ್ಮದ್‌ನನ್ನು ಜುನೈದ್ ಅಪಹರಿಸಿ ಕೊಲೆ ಮಾಡಿದ್ದು ಪ್ರಕರಣ ಸಂಬಂಧ ಪೊಲೀಸರು ೨೧ ಮಂದಿಯನ್ನು ಬಂಧನಕ್ಕೊಳಪಡಿಸಿದ್ದರು. ಪ್ರಕರಣದಲ್ಲಿ ಜೈಲಿಗೆ ಹೋದ ಜುನೈದ್ ನೇರ ಸಂಪರ್ಕ ಮಾಡಿದ್ದು, ಶಂಕಿತ ಉಗ್ರ ನಾಸೀರ್ ಎಂಬಾತನನ್ನು ಜೈಲಿನಿಂದ ಹೊರ ಬಂದು ಮತ್ತೆ ೨೦೨೦ರಲ್ಲಿ ರಕ್ತಚಂದನ ಸಾಗಿಸುವ ಪ್ರಕರಣದಲ್ಲಿ ಒಳ ಹೋಗಿದ್ದ. ನಂತರ ಜಾಮೀನಿನಿಂದ ಹೊರ ಬಂದವ ಸಂಪೂರ್ಣ ತಂಡ ಕಟ್ಟಿದ್ದ. ಬಳಿಕ ಅವರ ತಂಡ ನೇರ ದುಬೈಗೆ ಹಾರಿತ್ತು.
೨೦೨೧ರಲ್ಲಿ ಭಾರತದ ಗಡಿ ದಾಟಿದ್ದ ಈತ, ಆಫ್ಘಾನ್ ಗಡಿ ಸಮೀಪ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ. ಅಲ್ಲಿಂದಲೇ ಬೆಂಗಳೂರಿನಲ್ಲಿರುವ ತನ್ನ ಸಹಚರರಿಗೆ ಸೂಚನೆಗಳನ್ನು ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಅಧಿಕಾರಿಗಳು ಜುನೈದ್ ಬಗ್ಗೆ ಇಂಟರ್ ಪೋಲ್‌ಗೆ ಮಾಹಿತಿ ನೀಡಿದ್ದಾರೆ. ಉಗ್ರ ಚಟುವಟಿಕೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಐವರು, ಜುನೈದ್ ಜೊತೆಗೆ ಸಂಪರ್ಕದಲ್ಲಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ನಡುವೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ರಾಜ್ಯ ಪೊಲೀಸರು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಲು ಚಿಂತನೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಪ್ರಕರಣ ಸಂಬಂಧ ಸಿಸಿಬಿ ಜುನೈದ್ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದೆ.