ರಾಜ್ಯದ ಹಲವೆಡೆ ವರುಣನ ಅಬ್ಬರ:ಜನಜೀವನ ಅಸ್ತವ್ಯಸ್ತ

ಬೆಂಗಳೂರು, ಸೆ. ೧೩- ರಾಜ್ಯದ ಹಲವೆಡೆ ವರುಣನ ಆರ್ಭಟ ಆರಂಭವಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಡಿಕೇರಿಯಲ್ಲಿ ಮೂರು ದಿನಗಳಿಂದ ಹಲವು ಭಾಗಗಳಲ್ಲಿ ವರ್ಷಧಾರೆಯಾಗಿದ್ದು, ಕಾವೇರಿ ನದಿ ಭೋರ್ಗರೆಯುತ್ತಿದೆ.
ಹೀಗಾಗಿ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.
ಕೊಡಗಿನ ಕಾವೇರಿ ಉಗಮ ಸ್ಥಾನ, ತಲಕಾವೇರಿ, ಭಾಗಮಂಡಲ ಸುತ್ತಮುತ್ತ ಭಾರಿ ಮಳೆ ಸುರಿಯುತ್ತಿದೆ. ಇದರಿಂದಾಗಿ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ನೀರಿನ ಹರಿಯುವಿಕೆಯಲ್ಲಿ ಭಾರಿ ಏರಿಕೆಯಾಗಿದೆ. ಸಂಗಮ ಭರ್ತಿಗೆ ೨ ಅಡಿಗಳು ಮಾತ್ರ ಬಾಕಿ ಇದೆ. ಮಳೆ ಹೀಗೆ ಮುಂದುವರೆದರೆ ತ್ರಿವೇಣಿ ಸಂಗಮ ಭರ್ತಿಯಾಗಲಿದೆ.
ಮಡಿಕೇರಿ, ನಾಪೋಕ್ಲು, ಶುಂಠಿಕೊಪ್ಪ, ಮಾದಾಪುರ, ಗಾಳಿಬಿಡು ಸೇರಿದಂತೆ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದೆ. ಇದರಿಂದಾಗಿ ಕೊಡಗಿನ ಜನರಲ್ಲಿ ಪ್ರವಾಹ ಹಾಗೂ ಭೂಕುಸಿತದ ಭೀತಿ ಎದುರಾಗಿದೆ.
ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗುಹ್ಯ ಬೆಟ್ಟದ ಭಾಗಗಳಲ್ಲಿ ಕಾವೇರಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ನದಿಪಾತ್ರದ ಜನರಲ್ಲಿ ಆತಂಕ ಎದುರಾಗಿದೆ.
ಈ ಮಧ್ಯೆ ಬಳ್ಳಾರಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಸಂಡೂರು ಸೇರಿದಂತೆ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ಒಂದು ದಶಕದ ಬಳಿಕ ಸಂಡೂರಿನ ನಾರಿಹಳ್ಳಿ ಜಲಾಶಯ ಭರ್ತಿಯಾಗಿದೆ.
ಸಂಡೂರು ಉತ್ತರ ಕರ್ನಾಟಕದ ಮಲೆನಾಡು ಎಂದೇ ಖ್ಯಾತಿಯಾಗಿದ್ದು, ಗಿರಿಶೃಂಗಗಳ ಮಧ್ಯದಲ್ಲಿ ನೀರು ತುಂಬಿದ್ದು ನಾರಿಹಳ್ಳ ದೃಶ್ಯ ಅತ್ಯಂತ ಸುಂದರವಾಗಿದೆ.
ಧಾರವಾಡದಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆ ಹಾಗೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಯಿತು. ಪ್ರತಿ ಭಾರಿ ಮಳೆ ಬಂದಾಗ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.