ರಾಜ್ಯದ ಹಲವೆಡೆ ಮಳೆ ನಿರೀಕ್ಷೆ

ಬೆಂಗಳೂರು,ಏ.೨೦-ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಎಲ್ಲಾ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ನಿಜವಾಗಿದೆ.
ಇಂದು ಬೆಳಿಗ್ಗೆಯಿಂದಲೇ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಬೆಳಗ್ಗೆಯಿಂದಲೇ ದಟ್ಟ ಮೋಡಗಳು ಆವರಿಸಿವೆ. ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ವ್ಯಾಪಕ ಮಳೆ ಆರಂಭವಾಗಿದೆ.
ರಾಜ್ಯದಲ್ಲಿ ಬಿಸಿಲಿನ ತಾಪಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಸುಡು ಬಿಸಿಲಿನಿಂದ ಜನ ತತ್ತರಿಸಿದ್ದಾರೆ. ಬೆಂಗಳೂರು ನಿವಾಸಿಗಳಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ಇಂದು ಮಳೆಯಾಗುವ ಮುನ್ಸೂಚನೆ ಇದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಧಾರವಾಡ, ಮರಿಯಮ್ಮನಹಳ್ಳಿ, ಹೊಸಪೇಟೆ, ವಿಜಯನಗರ, ದೇವಲಾಪುರ ಸೇರಿದಂತೆ ಹಲವೆಡೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಗಂಟೆಗೆ ೩೦ ರಿಂದ ೪೦ ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ಮಂಡ್ಯ, ರಾಯಚೂರು, ವಿಜಯನಗರ, ವಿಜಯಪುರ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಧಾರಾಕಾರ ಮಳೆಯಾಗಿದೆ, ಬಿಸಿಲಿನಿಂದ ಬಸವಳಿದಿದ್ದ ಜನರು ಮಳೆಯಿಂದ ಸಂತಸಗೊಂಡಿದ್ದಾರೆ.
ರಾಜ್ಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇಂದು ಮಳೆಯಾಗುವ ಸಾಧ್ಯತೆ ಇದೆ. ಜನರು ಸಹ ಮಳೆಗಾಗಿ ಕಾಯುತ್ತಿದ್ದಾರೆ.