ರಾಜ್ಯದ ಹಲವೆಡೆ ಆಲಿಕಲ್ಲು ಮಳೆ

ಬೆಂಗಳೂರು ,ಏ.೨೦-ಚಿತ್ರದುರ್ಗ ನಗರ ಹಾಗೂ ಜಿಲ್ಲೆಯ ಕೆಲವೆಡೆ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ .
ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ. ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿದ್ದ ಜನರ ಮುಖದಲ್ಲಿ ಸಂತಸದ ನಗೆ ಹೊಮ್ಮಿದೆ.
ಚಿಕ್ಕಜಾಜೂರಿನಲ್ಲಿ ಆಲಿಕಲ್ಲು ಮಳೆಯಾಗಿದೆ, ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಬಿರುಗಾಳಿಗೆ ನೂರಾರು ಅಡಿಕೆ, ತೆಂಗಿನ ಮರಗಳು, ವಿದ್ಯುತ್ ಕಂಬಗಳು ಬಿದ್ದಿವೆ. ಚಿತ್ರದುರ್ಗ ನಗರದಲ್ಲಿ ೧೫ ನಿಮಿಷಗಳ ಕಾಲ ಧಾರಾಕಾರ ಮಳೆ ಸುರಿದಿದೆ.
ದಾವಣಗೆರೆಯ ಹಲವೆಡೆ ಮಳೆ-ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ತ್ಯಾವಣಿಗೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ. ದಾವಣಗೆರೆ ನಗರದಲ್ಲಿ ಬಿರುಗಾಳಿ, ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಉತ್ತಮ ಮಳೆಯಿಂದಾಗಿ ರೈತರು ಸಂಭ್ರಮಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಆಲ್ದೂರು ಸುತ್ತಮುತ್ತ ಆಲಿಕಲ್ಲು ಸಹಿತ ಮಳೆಯಾಗಿದ್ದು, ಬಿಸಿಲಿನಲ್ಲಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ಕಾಫಿ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮಾವಿನಗುಣಿ, ಆಲ್ದೂರು, ಅರೇನೂರು, ಕೆಲಗೂರು, ಶಂಕರ್ ಫಾಲ್ಸ್ ಸುತ್ತಮುತ್ತ ಮಳೆಯಾಗಿದೆ. ಕಾಫಿ ಗಿಡಗಳಲ್ಲಿ ಮೊಳಕೆಯೊಡೆಯಲು ಮತ್ತು ಕಾಯಿಗಳಿಗೆ ಈ ಮಳೆ ಪ್ರಯೋಜನಕಾರಿಯಾಗಿದೆ. ಎನ್ ಆರ್ ಪುರ, ಬಾಳೆಹೊನ್ನೂರು ಸುತ್ತಮುತ್ತ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು ನಗರ, ಕಡೂರು, ತರೀಕೆರೆ ಸುತ್ತಮುತ್ತಲ ಪ್ರದೇಶಗಳಲ್ಲಿ ತುಂತುರು ಮಳೆಯಾಗಿದೆ. ಗುರುವಾರ ರಾತ್ರಿ ಎನ್.ಆರ್.ಪುರ ತಾಲೂಕಿನ ಹಲವೆಡೆ ಧಾರಾಕಾರ ಮಳೆ ಬಿದ್ದಿದ್ದು, ಸಾಲು ಮರಗಳು, ವಿದ್ಯುತ್ ಕಂಬಗಳು ಬಿದ್ದಿವೆ. ಬಾಳೆ ತೋಟ ಸಂಪೂರ್ಣ ನಾಶವಾಗಿದೆ.
ಮೈಸೂರು ಭಾಗದ ಕೊಡಗು, ಚಾಮರಾಜನಗರ, ಹಾಸನ, ಮಂಡ್ಯದಲ್ಲಿ ಶುಕ್ರವಾರ ಗುಡುಗು ಸಹಿತ ಮಳೆಯಾಗಿದೆ.
ಕೊಡಗು ಜಿಲ್ಲೆಯ ನಾಪೋಕ್ಲು ಪಟ್ಟಣದ ಸುತ್ತಮುತ್ತ ಬೇತು, ಕೊಟ್ಟಮುಡಿ, ಬಲಮುರಿ, ಪಾಲೂರು ಸೇರಿದಂತೆ ಹಲವೆಡೆ ಸುಮಾರು ೩೦ ನಿಮಿಷಗಳ ಕಾಲ ಮಳೆಯಾಗಿದೆ. ಬೇತು ಗ್ರಾಮದಲ್ಲಿ ೨ ಸೆಂ.ಮೀ ಮಳೆಯಾಗಿದೆ. ಸುಂಟಿಕೊಪ್ಪ ಪ್ರದೇಶದಲ್ಲೂ ಮಳೆಯಾಗಿದೆ. ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಗೆ ಮಳೆಯ ಕಾರಣ ಅಡ್ಡಿ ಉಂಟಾಗಿದೆ.
ಸಮೀಪದ ಪಾಲೂರು ಗ್ರಾಮದಲ್ಲಿ ವಾರ್ಷಿಕ ಉತ್ಸವದ ನೃತ್ಯಬಲಿಯನ್ನು ಮಳೆಯಲ್ಲಿಯೇ ಗ್ರಾಮಸ್ಥರು ನೆರವೇರಿಸಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಕೇಂದ್ರ ಸ್ಥಾನ ಸೇರಿದಂತೆ ಹುಣಸೂರು ತಾಲೂಕಿನ ಪ್ರೀ ಕೊಪ್ಪಲು, ಅಂಕನಹಳ್ಳಿ, ಕಿರಳ್ಳಿ, ಹರವೆ ಮಲ್ಲರಾಜ ಪಟ್ಟಣ, ಹುಣಸೆಕುಪ್ಪೆ, ಮೆಳ್ಳಹಳ್ಳಿ, ಹನಗೋಡಿನಲ್ಲಿ ಭಾರಿ ಮಳೆಯಾಗಿದೆ. ಶುಂಠಿ, ತಂಬಾಕು, ಬಾಳೆ ಮತ್ತು ರಾಗಿ ಬೆಳೆಯಲು ಅನುಕೂಲಕರ ಪರಿಸ್ಥಿತಿಗಳು ಸೃಷ್ಟಿಯಾದ ಕಾರಣ ರೈತರು ಸಂತೋಷಪಟ್ಟರು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಹತ್ತು ನಿಮಿಷ ಮಳೆ ಸುರಿದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು ಒಂದು ಗಂಟೆಗಳ ಕಾಲ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿದಿದೆ. . ಚನ್ನರಾಯ ಪಟ್ಟಣ, ಹಾಸನ, ಮೈಸೂರು ನಗರಗಳಲ್ಲೂ ಮಳೆಯಾಗಿದೆ.