ರಾಜ್ಯದ ಹಲವಡೆ ಮಳೆ: ಸಿಡಿಲು ಬಡಿದು ಮೂವರ ಸಾವು

ಹಾವೇರಿ.ಏ.೧೩- ರಾಜ್ಯದ ವಿವಿಧೆಡೆ ಭಾರಿ ಮಳೆಯಾಗಿದ್ದು ಸಾವು, ನೋವು ಸಂಭವಿಸಿದೆ. ವಿಜಯಪುರದಲ್ಲಿ ಸಿಡಿಲಿಗೆ ಮೂವರು ಬಲಿಯಾಗಿದ್ದಾರೆ.
ಮೂವರು ಇಂಡಿ ತಾಲ್ಲೂಕಿನವರಾಗಿದ್ದಾರೆ. ಇಲ್ಲಿನ ಮಾವಿನಹಳ್ಳಿ ಬಳಿರಸ್ತೆ ಬಳಿ ಜಮೀನಿನಲ್ಲಿ ೧೬ ವರ್ಷದ ಬಾಲಕ ಬೀರಪ್ಪ ನಿಂಗಪ್ಪ ಸಾವನಪ್ಪಿದ ದುರ್ಧೈವಿಯಾಗಿದ್ದಾರೆ. ಮಸಳಿ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸೋಮಶೇಖರ ಪಟ್ಟಣ ಶೆಟ್ಟಿ ಮೃತಪಟ್ಟಿದ್ದಾರೆ. ತಾಂಬಾ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಭಾರತಿ ಹಣಮಂತ ಕೆಂಗನಾಳ(೪೦) ಸಿಡಿಲಿಗೆ ಮೃತಪಟ್ಟಿದ್ದಾರೆ.
ಇನ್ನು ಹಾವೇರಿ, ಶಿವಮೊಗ್ಗ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಿದ್ದು ಸಾರ್ವಜನಿಕರು ಸಂತಸಗೊಂಡಿದ್ದಾರೆ.
ಆದರೆ ರಾಜ್ಯದ ಹಲವಡೆ ಧಾರಾಕಾರ ಗಾಳಿ ಮತ್ತು ಮಳೆಯಿಂದ ಮನೆಯ ಮೇಲ್ಛಾವಣೆ ಮತ್ತು ತಗಡಿನ ಶೀಟ್‌ಗಳು ಹಾರಿ ಹೋಗಿವೆ. ಕೆಲವಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ವಿದ್ಯುತ್ ಕಂಬ ಧರೆಗುರುಳಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಷ್ಟು ದಿನ ಬಿಸಿಲಿನ ತಾಪದಿಂದ ತತ್ತರಿಸಿದ್ದ ಜನರಿಗೆ ಮಳೆ ತಂಪೆರೆದಿದೆ.
ಇನ್ನು ಶಿವಮೊಗ್ಗ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದೆ. ಇಲ್ಲಿನ ಆಯನೂರನ ಕೋಟೆ ಗ್ರಾಮದಲ್ಲಿ ಸಿಡಿಲು ಬಡಿದು ೧೮ ಕುರಿಗಳು ಸಾವನಪ್ಪಿವೆ. ಜಾಕೀರ್ ಹುಸೇನ್ ಎಂಬವವರ ಮಕ್ಕಳು ಮೇಯಿಸಲು ಹೋದಾಗ ಈ ದುರ್ಘಟನೆ ನಡೆದಿದೆ. ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.ಈ ಬಗ್ಗೆ ಪಶು ಇಲಾಖೆ ಅಧಿಕಾರಿಗಳಿಗೆ ಜಾಕೀರ್ ಹುಸೇನ್ ಮಾಹಿತಿ ಕೊಟ್ಟಿದ್ದು ೩ ಲಕ್ಷ ರೂ. ಪರಿಹಾರ ಕೇಳಿದ್ದಾರೆ.
ಗದಗದಲ್ಲೂ ಭಾರಿ ಮಳೆಯಾಗಿದ್ದು ಸಿಡಿಲಿಗೆ ೨೦ಕ್ಕೂ ಹೆಚ್ಚು ಕುರಿಗಳು ಕಿರಟಗೇರಿ ಗ್ರಾಮದಲ್ಲಿ ಸಾವನಪ್ಪಿವೆ. ಮಳೆ ಬಂದಾಗ ಕುರಿಗಳು ಮರದ ಕೆಳಗೆ ಇದ್ದುದರಿಂದ ಇದೇ ಸಮಯದಲ್ಲಿ ಮರಕ್ಕೆ ಸಿಡಿಲು ಬಡಿದಿದೆ. ಮುತ್ತಪ್ಪ ದೊಡ್ಡಮನಿ ಹಾಗು ಶಿವಪ್ಪ ಹರಿಜನ ಅವರಿಗೆ ಸೇರಿದ ಕುರಿಗಳು ಸಾವನಪ್ಪಿವೆ. ಗ್ರಾಮಾಂತರ ಪೊಲೀಸರು ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಹಲವಡೆ ಭಾರೀ ಮಳೆಯಾಗಿದೆ. ಬಿಸಿಲಿನಿಂದ ಹೈರಾಣಗಿದ್ದ ಜನತೆಗೆ ಮಳೆ ನೆಮ್ಮದಿ ತಂದಿದೆ.
ಬೀದರ್‌ನಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಜಿಲ್ಲೆಯಾದ್ಯಂತ ಅವಾಂತರಗಳು ಸೃಷ್ಟಿಯಾಗಿವೆ. ನಗರ, ಔರಾದ್, ಕಮಲನಗರ, ಸಂತಪುರ, ಚಿಂತಾಕಿ, ವಡಗಾವ್,ಮಲನಗರ, ಮದನೂರ, ಖತಗಾಂ, ಮೂರ್ಕಿ ಸ್ಥಳಗಳಲ್ಲಿ ಮಳೆಯಾಗಿದೆ. ದೊಡ್ಡ ಮರಗಳು ಧರೆಗುರುಳಿವೆ. ಇದರ ಪರಿಣಾಮ ವಿದ್ಯುತ್ ಸಂಪರ್ಕಗಳು
ಕಡಿಗೊಂಡಿವೆ. ಕಮಲಾನಗರದ ರೈಲ್ವೆ ನಿಲ್ದಾಣದ ಬಳಿ ಮರ ನೆಲಕ್ಕುರುಳಿದೆ.ಮದನೂರಿನಲ್ಲಿ ಹಲವಾರು ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡಿತ್ತು.ಮನೆಯ ಸೀಟುಗಳು ಹಾರಿ ಹೋಗಿದ್ದು ಮನೆಯಲ್ಲಿರುವ ವಸ್ತುಗಳಿಗೆ ಹಾನಿಯಾಗಿದೆ. ಸದ್ಯ ಬೀದರ್‌ನಲ್ಲಿ ಮಳೆ ಮುಂದುವರೆಯುವ ಸೂಚನೆ ಇದೆ.