ರಾಜ್ಯದ ಸರ್ವಾಂಗೀಣ ಅಭಿವೃದ್ದಿಯೇ ಗುರಿ – ಬೊಮ್ಮಾಯಿ

ಹಾವೇರಿ: ನ.3- ಎರಡು ಸಾವಿರ ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಕನ್ನಡ ಭಾಷೆಯೇ ಅತ್ಯಂತ ಪ್ರಾಚೀನ ಭಾಷೆ. ತಮಿಳಿಗರು ತಮ್ಮ ಭಾಷೆ ಅತ್ಯಂತ ಪ್ರಾಚೀನ ಭಾಷೆ ಎಂದು ಪ್ರತಿಪಾದಿಸಿದರು ಭಾಷಾ ಇತಿಹಾಸದ ಅಧ್ಯಯನ ಭಾಷಾತಜ್ಞರ ಅಭಿಪ್ರಾಯದಂತೆ ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆಯಾಗಿದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಹಾವೇರಿ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ 65ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಂದೇಶ ನೀಡಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ಏಕೀಕರಣಗೊಂಡ ಕರ್ನಾಟಕ ರಾಜ್ಯಕ್ಕೆ 65 ವರ್ಷಗಳ ಇತಿಹಾಸವಿದ್ದರೆ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಗೂ ಅಧಿಕ ಪರಂಪರೆಯಿದೆ. ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆ ಎಂದು ಹೇಳಿದರು.
ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಇಚ್ಛಾಶಕ್ತಿ ಬದ್ದತೆ ಹಾಗೂ ದೂರದೃಷ್ಟಿಯ ಪರಿಣಾಮ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಒಕ್ಕೂಟ ವ್ಯವಸ್ಥೆ ಜಾರಿಗೊಂಡಿತ್ತು. 1956ರಲ್ಲಿ ಏಕೀಕರಣಗೊಂಡ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಏಕೀಕರಣಗೊಂಡ ಕರ್ನಾಟಕ ನಾಡಿನ ಅಭಿವೃದ್ದಿಗೆ ಹಲವಾರು ಶ್ರಮಿಸಿದ್ದಾರೆ, ಈ ಎಲ್ಲ ಮಹನೀಯರ ಕೊಡುಗೆಯನ್ನು ಸ್ಮರಿಸೋಣ ಎಂದರು.
ಪಾರಂಪರಿಕ ಕನ್ನಡ ಭಾಷೆ, ಸಂಸ್ಕøತಿ, ಪರಂಪರೆಗೆ ಹಲವು ರಾಜ ಪರಂಪರೆಗಳು, ಸಾಹಿತಿಗಳು ಶ್ರಮಿಸಿದ್ದಾರೆ. ಶಂಕರಾಚಾರ್ಯರು, ಬಸವಣ್ಣನವರು, ಪಂಪ, ರನ್ನ, ಕನಕದಾಸರು, ಸರ್ವಜ್ಞರಂತಹ ಸಹಸ್ರಾರು ಕವಿಗಳು ಈ ನಾಡಿನ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಭಾಷಾ ಸಾಹಿತ್ಯಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಈ ಎಂಟು ಪುರಸ್ಕಾರಗಳಲ್ಲಿ ಹಾವೇರಿ ಜಿಲ್ಲೆಯ ವಿ.ಕೃ ಗೋಕಾಕ್ ಅವರು ಅತ್ಯಂತ ಶ್ರೇಷ್ಠ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿಗಳು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತ್ಯ ಸಂಸ್ಕøತಿಯ ಜೊತೆಗೆ ಆರ್ಥಿಕ, ಔದ್ಯೋಗಿಕ ಹಾಗೂ ತಾಂತ್ರಿಕ ಬೆಳವಣಿಗೆಯಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ನಂಜುಡಪ್ಪ ವರದಿಯ ಅನುಸಾರ ಉತ್ತರ ಕರ್ನಾಕದ ಅಭಿವೃದ್ದಿಯ ಜೊತೆಗೆ ಮೂಲ ಸೌಕರ್ಯಗಳ ಬೆಳವಣಿಗೆಗೆ ಒತ್ತು ನೀಡಲಾಗಿದೆ. ಹಾವೇರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಔದ್ಯೋಗಿಕ ಬೆಳವಣಿಗೆ, ಐಟಿ ಕ್ಷೇತ್ರದ ಬೆಳವಣಿಗೆ ಕೃಷಿಯಲ್ಲಿ ಆಧುನಿಕತೆ ತರುವ ಕಾರ್ಯ ಆಗಬೇಕಾಗಿದೆ. ಈ ಕಾರ್ಯದ ಮೂಲಕ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಜನೆ ಮಾಡುವ ಅಭಿಲಾಷೆ ಹೊಂದಲಾಗಿದೆ. ಏಕೀಕರಣ ಹಾಗೂ ಹಾವೇರಿ ಜಿಲ್ಲೆಯ ರಚನೆಯ ಸಂದರ್ಭದಲ್ಲಿ ಹೋರಾಟಗಾರರು, ಚಿಂತಕರು ಕಂಡ ಕನಸುಗಳನ್ನು ನನಸು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಶಾಸಕರಾದ ನೆಹರು ಓಲೇಕಾರ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಏಕನಾಥ ಬಾನುವಳ್ಳಿ, ನಗರಸಭೆ ಅಧ್ಯಕ್ಷರಾದ ಸಂಜೀವಕುಮಾರ ನೀರಲಗಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ ದೇವರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಸ್ ಯೋಗೇಶ್ವರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಹಶೀಲ್ದಾರ್ ಶಂಕರ ಇತರರು ಉಪಸ್ಥಿತರಿದ್ದರು.