ರಾಜ್ಯದ ಸಮಗ್ರ ಅಭಿವೃದ್ದಿಗೆ ಬಿಜೆಪಿ ಬೆಂಬಲಿಸಲು ಮನವಿ: ಅಮಿತ್ ಶಾ

ಬೆಂಗಳೂರು,ಮಾ.3- ರಾಜ್ಯದಲ್ಲಿ ಸಮಗ್ರ ಬದಲಾವಣೆಗೆ ಬಿಜೆಪಿ ಬೆಂಬಲಿಸುವಂತೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ.

ಜೆಡಿಎಸ್‍ಗೆ 25- 30 ಸ್ಥಾನಗಳು ಬಂದರೆ ಅದು ಕಾಂಗ್ರೆಸ್ ಜೊತೆಗೂಡುತ್ತದೆ. ಬೆಂಗಳೂರು, ದಕ್ಷಿಣ ಕರ್ನಾಟಕದಲ್ಲಿ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು.

ದೇವನಹಳ್ಳಿಯ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದು ಬಿಜೆಪಿ ವಿಜಯಸಂಕಲ್ಪ 4ನೇ ಯಾತ್ರೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಭ್ರಷ್ಟಾಚಾರಿಗಳ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಮತ ಕೊಡಬೇಕೇ? ಅಭಿವೃದ್ಧಿಗೆ ಬದ್ಧ ಇರುವ ಬಿಜೆಪಿಗೆ ಮತ ಕೊಡಬೇಕೇ ಎಂದು ನಿರ್ಧರಿಸಿ ಎಂದು ತಿಳಿಸಿದರು.

ಪರಿವಾರವಾದ, ಕುಟುಂಬವನ್ನು ಪೋಷಿಸುವ ಇವೆರಡು ಪಕ್ಷಗಳನ್ನು ಬೆಂಬಲಿಸಬೇಕೇ ಎಂದು ಚಿಂತಿಸಿ ಮತ ಚಲಾಯಿಸಿ ಎಂದು ಸವಾಲು ಹಾಕಿದ್ದಾರೆ.

ಈಶಾನ್ಯದಿಂದ ಗುಜರಾತ್‍ವರೆಗೆ ಬಿಜೆಪಿ ಆಡಳಿತ ಬಂದಿದೆ. ನೀವು ಬಿಜೆಪಿ ಬೆಂಬಲಿಸಿ ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರಕಾರ ರಚಿಸಲು ನೆರವಾಗಿ. ಮೋದಿಜಿ, ಬೊಮ್ಮಾಯಿಯವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.

ಪಿಎಫ್‍ಐ ಬ್ಯಾನ್ ಮಾಡಿದ ಬಿಜೆಪಿಗೆ ಮತ ಕೊಡಬೇಕೇ? ಭಯೋತ್ಪಾದಕರಿಗೆ ಉತ್ತೇಜನ ನೀಡುವ ಕಾಂಗ್ರೆಸ್ ಬೆಂಬಲಿಸಬೇಕೇ ಎಂದು ತೀರ್ಮಾನ ಮಾಡಬೇಕು. ಕರ್ನಾಟಕದ ಬಡವರ ಕುರಿತು ಕೇವಲ ಬಿಜೆಪಿ ಚಿಂತನೆ ಮಾಡಲಿದೆ. ಕೌಟುಂಬಿಕ ಪಕ್ಷಗಳಿಂದ ಇದು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ಬೆಂಗಳೂರು ಮೈಸೂರು ದಶಪಥ ರಸ್ತೆಯನ್ನು ಸಾವಿರಾರು ಕೋಟಿಯಲ್ಲಿ ನಿರ್ಮಾಣ ಮಾಡಿದ್ದೇವೆ. ಮೊದಲ ವಂದೇ ಭಾರತ್ ಟ್ರೈನ್ ಹೈಸ್ಪೀಡ್ ರೈಲು ಆರಂಭ, ಬೆಂಗಳೂರು- ಚೆನ್ನೈ- ಮೈಸೂರು ಎಕ್ಸ್‍ಪ್ರೆಸ್ ರೈಲ್ವೆ ಕಾರಿಡಾರ್ ಕಾಮಗಾರಿ ಶುರು ಮಾಡಿದ್ದೇವೆ ಎಂದರು.

ರೈಲ್ವೆಯಲ್ಲಿ 10 ವರ್ಷ ಕಾಲ ಕಾಂಗ್ರೆಸ್ ಹೂಡಿದ ಹಣಕ್ಕಿಂತ 9 ಪಟ್ಟು ಹೆಚ್ಚು ಅನುದಾನವನ್ನು ನಾವು ನೀಡಿದ್ದೇವೆ. ಮೆಟ್ರೊಗೆ 15 ಸಾವಿರ ಕೋಟಿ ಹೂಡಿಕೆ, ಸೆಟಲೈಟ್ ಟೌನ್‍ಶಿಪ್ ನಿರ್ಮಾಣ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಸೆಟಲೈಟ್ ಟೌನ್ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಬೆಂಗಳೂರು ವಿಮಾನನಿಲ್ದಾಣದ 2ನೇ ಟರ್ಮಿನಲ್ ಉದ್ಘಾಟನೆ ಮಾಡಿದ್ದೇವೆ. ಬೆಂಗಳೂರು ನಗರದ ಮಹತ್ವದ ಅರಿವು ನಮಗಿದೆ. ವಿಮಾನನಿಲ್ದಾಣ ಇನ್ನಷ್ಟು ವಿಸ್ತರಣೆಗೆ ಯಾವತ್ತೇ ಇದ್ದರೂ ಅನುದಾನ ನೀಡಲು ಸಿದ್ಧ ಎಂದು ಪ್ರಕಟಿಸಿದರು. ಮೋದಿಜಿ ದೇಶ ಸುರಕ್ಷತೆಗೆ ಆದ್ಯತೆ ಕೊಟ್ಟಿದ್ದಾರೆ ಎಂದು ಹೇಳಿದರು.

ಯುಪಿಎ ಅವಧಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಒಳನುಸುಳಿ ದೇಶದ ಸೈನಿಕರನ್ನು ಕೊಲ್ಲುತ್ತಿದ್ದರು. ನಾವು ಫುಲ್ವಾಮಾ ದಾಳಿಯನ್ನು ಮೋದಿಜಿ ನೇತೃತ್ವದಲ್ಲಿ ಸಮರ್ಥವಾಗಿ ಎದುರಿಸಿದ್ದೇವೆ ಎಂದು ವಿವರಿಸಿದರು.