ರಾಜ್ಯದ ವಿವಿದೆಡೆಗಳಲ್ಲಿ ಧರ್ಮಸ್ಥಳ ಸಾಮೂಹಿಕ ವಿವಾಹದಲ್ಲಿ ನೋಂದಾಯಿತ ಜೋಡಿಗಳ ವಿವಾಹ

ಉಜಿರೆ, ಎ.೩೦-ರಾಜ್ಯದ ಇಪ್ಪತ್ಮೂರು ಜಿಲ್ಲೆಗಳಲ್ಲಿ ಇಂದು ೧೨೧ ಜೋಡಿಗಳು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು ಆಯೋಜಿಸಿದ ವಿವಾಹ ಕಾರ್ಯಕ್ರಮದಲ್ಲಿ ಸಪ್ತಪದಿ ತುಳಿದು ಕಂಕಣಬದ್ಧರಾಗಿದ್ದಾರೆ. ಈ ಕುರಿತು ವಿವರಗಳನ್ನು ನೀಡಿದ ಹೆಗ್ಗಡೆಯವರು, ಕೊರೋನಾ ಕಾರಣದಿಂದಾಗಿ ಈ ಬಾರಿ ಧರ್ಮಸ್ಥಳದಲ್ಲಿ ಏಪ್ರಿಲ್ ೨೯ ರಂದು ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಆಯಾ ಜೋಡಿಗಳ ಒಪ್ಪಿಗೆಯಂತೆ ಅವರವರ ಊರುಗಳಲ್ಲಿಯೇ ನೆರವೇರಿಸಲಾಯಿತುಎಂದು ತಿಳಿಸಿದರು.


ಪ್ರತಿ ವರ್ಷ ಸಾಂಪ್ರದಾಯಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಚರಿಸಲಾಗುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೂರಾರು ಜೋಡಿಗಳು ಸಂಭ್ರಮದಿಂದ ಸ್ವಾಮಿ ಸನ್ನಿಧಿಯಲ್ಲಿ ವಿವಾಹವಾಗುತ್ತಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಇಂದು ಮುಂಜಾನೆ ೮:೫೫ ಕ್ಕೆ ಸರಿಯಾಗಿ ದೇವಳದ ಮುಂಭಾಗದಲ್ಲಿ ಒಂದು ಜೋಡಿ ಮಾತ್ರ ವಿವಾಹ ಮಾಡಿಕೊಂಡರು.ಉಳಿದ ಜೋಡಿಗಳು ಹೆಗ್ಗಡೆಯವರ ಮಾರ್ಗದರ್ಶನದಂತೆ ತಮ್ಮ ತಮ್ಮ ಊರ ದೇವಸ್ಥಾನಗಳಲ್ಲಿ ವಿವಾಹ ನೆರವೇರಿಸಿಕೊಂಡರು.ನೋಂದಾಯಿತ
ಪ್ರತಿಯೊಂದು ಜೋಡಿಗೂ ತಾಳಿ ಸಹಿತ ಮಂಗಳ ಸೂತ್ರ, ಸೀರೆ, ದೋತಿ, ಶಲ್ಯ ಉಡುಗೊರೆಗಳನ್ನು
ನೀಡಲಾಯಿತು.ಅಲ್ಲದೇ ನೂತನ ದಂಪತಿಗಳಿಗೆ ವಿವಾಹದ ಖರ್ಚನ್ನು ನಿಭಾಯಿಸಲು ತಲಾ ರೂ.೧೦,೦೦೦/- ವನ್ನು ಧರ್ಮಸ್ಥಳದಿಂದ ಒದಗಿಸಲಾಗಿದೆ.
ಎಲ್ಲ್ಲ ಜೋಡಿಗಳಿಗೂ ಹೆಗ್ಗಡೆಯವರು ವಿಡಿಯೋ ಸಂದೇಶ ಕಳುಹಿಸಿ ಆಶೀರ್ವಾದ ಗೈದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.)ಯ ಕಾರ್ಯಕರ್ತರು ಕ್ಷೇತ್ರದಿಂದ ಕೊಡ ಮಾಡಿದ ವಸ್ತುಗಳನ್ನು ಕ್ಲಪ್ತ ಸಮಯಕ್ಕೆ ವಧು ವರರಿಗೆ ಮುಟ್ಟಿಸಿದ್ದಲ್ಲದೇ ಸರಕಾರದ ನಿಯಮದಂತೆ ವಿವಾಹ ನಡೆಸಲುಸೂಕ್ತ ತಿಳುವಳಿಕೆಯನ್ನು ನೀಡಿವಿವಾಹ ಸಮಯದಲ್ಲಿ ಸ್ಥಳದಲ್ಲಿ ಹಾಜರಿದ್ದು ಶುಭ ಹಾರೈಸಿದರು.
ಸರಕಾರದ ನಿಯಮಾವಳಿಗಳನ್ನು ಪಾಲಿಸುತ್ತಲೇ ೧೨೧ ಜೋಡಿಗಳಿಗೆ ಕಂಕಣ ಭಾಗ್ಯವನ್ನು ವ್ಯವಸ್ಥೆಗೊಳಿಸಿ ಹೆಗ್ಗಡೆಯವರ ದೂರದರ್ಶಿತ್ವದ ಬಗ್ಗೆ ವಧು ವರರ ಕುಟುಂಬವರ್ಗದವರು ಸಂತೋಷವನ್ನು, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ತಮಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿಯೇ ವಿವಾಹವಾದಷ್ಟು ತೃಪ್ತಿತಂದಿದೆ ಎಂಬ ಭಾವನೆಯನ್ನು ವಧು ವರರು ವ್ಯಕ್ತಪಡಿಸಿದ್ದಾರೆಂದು ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ
ಡಾ| ಎಲ್.ಎಚ್.ಮಂಜುನಾಥ್ ತಿಳಿಸಿದ್ದಾರೆ.