
ಕೋಲಾರ,ಏ,೭- ಕೋಲಾರ ಕ್ರೀಡಾ ಸಂಘದ ವತಿಯಿಂದ ೨೦೨೩ ನೇ ಸಾಲಿನ ಬೇಸಿಗೆ ತರಬೇತಿ ಶಿಬಿರದ ಮಕ್ಕಳನ್ನು ಕೋಲಾರದ ಐತಿಹಾಸಿಕ ಕರಗದ ಪರಿಚಯ ನೀಡುವ ಸಲುವಾಗಿ ಕಠಾರಿಪಾಳ್ಯದ ಧರ್ಮರಾಯ ದೇವಾಲಯಕ್ಕೆ ಕರೆದೊಯ್ಯಲಾಯಿತು.
ದೇವಾಲಯದ ಮುಖ್ಯ ಪುರೋಹಿತರಾದ ರಾಜಣ್ಣನವರು ಮಕ್ಕಳಿಗೆ ಕರಗದ ಆಚರಣೆಯ ಬಗ್ಗೆ, ಈ ಉತ್ಸವದ ಹಿಂದಿನ ಮಹತ್ವದ ಬಗ್ಗೆ, ಪುರಾತನ ದೇವಾಲಯದ ಐತಿಹಾಸಿಕ ವಿಷಯಗಳ ಬಗ್ಗೆ ವಿವರಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕ ರಾಜ್ಯದಲ್ಲಿ ಆನೇಕಲ್, ಕೋಲಾರ ಮತ್ತು ಬೆಂಗಳೂರು ಈ ಮೂರು ಕಡೆಗಳಲ್ಲಿ ಮಾತ್ರ ಕರಗ ನಡೆಯುತ್ತಿದ್ದು, ಈ ಮೂರು ಮೂಲ ಕರಗಗಳಾಗಿವೆ ಎಂದು ತಿಳಿಸಿದರು.
ಈ ದೇವಾಲಯಗಳಿಗೆ ಬ್ರಿಟೀಷ್ ಅಧಿಕಾರಿಗಳು ಸಹ ಭೇಟಿ ನೀಡುತ್ತಿದ್ದ ಬಗ್ಗೆ ಮಾಹಿತಿ ನೀಡಿದರು. ಕೋಲಾರದ ಕಠಾರಿಪಾಳ್ಯದ ಧರ್ಮರಾಯ ದೇವಾಲಯದಲ್ಲಿರುವ ದ್ರೌಪತಿ ದೇವಿ ವಿಗ್ರಹವು ಉಧ್ಬವ ಮೂರ್ತಿಯಾಗಿದ್ದು, ಈ ಬಗ್ಗೆ ಅನುಮಾನಗೊಂಡ ಬ್ರಿಟೀಷರು ಪರಿಶೀಲಿಸಿ ಇದು ಉಧ್ಬವ ಮೂರ್ತಿ ಎಂಬುದನ್ನು ದೃಡಪಡಿಸಿಕೊಂಡ್ಡಿದ್ದರ ಬಗ್ಗೆ ತಿಳಿಸಿದರು.
ಕರಗ ಆಚರಣೆಯ ಕಾಲದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಬ್ರಿಟಿಷ್ ಅಧಿಕಾರಿಯೊಬ್ಬ ಉತ್ಸವದ ಸಂಧರ್ಭದಲ್ಲಿ ಖಡ್ಗದಿಂದ ಹೊಡೆದುಕೊಳ್ಳುವ ವಹ್ನಿಕುಲ ಕ್ಷತ್ರೀಯರ ಆಚರಣೆ ಬಗ್ಗೆ ಅನುಮಾನಗೊಂಡು, ಇವರು ಉಪಯೋಗಿಸುತ್ತಿರುವ ಖಡ್ಗ ನಕಲಿಯೆಂದು ಹೇಳಿ ತಾನೇ ಬಲಿಷ್ಟವಾದ ಖಡ್ಗವೊಂದನ್ನು ತರಿಸಿ ಆ ಖಡ್ಗದಿಂದ ಹೊಡೆದುಕೊಳ್ಳುವಂತೆ ತಿಳಿಸಿದಾಗ ಆ ಖಡ್ಗ ಒಂದೇ ಏಟಿಗೆ ಮೂರು ತುಂಡಾದ ಬಗ್ಗೆ ವಿವರಿಸಲಾಗಿ ಮಕ್ಕಳು ಆಶ್ಚರ್ಯಚಕಿತರಾಗಿ ಆಲಿಸಿದರು.
ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಮಕ್ಕಳಿಗೆ ಹಸಿ ಕರಗದ ಮುನ್ನಾ ದಿನದಿಂದ ಆರಂಭವಾಗುವ ಕರಗ ಆಚರಣೆಯ ಹಸಿ ಕರಗ, ಹೂವಿನ ಕರಗ, ವಸಂತೋತ್ಸವ, ದೀಪಗಳು, ಕೆಂಡಸೇವೆ ಬಗ್ಗೆ ಮಾಹಿತಿ ನೀಡಿದರು. ಕರಗವನ್ನು ಹೊತ್ತು ನರ್ತಿಸುವ ನರ್ತಕನಿಂದ ದೇವಾಲಯವ ಪೂಜಾರಿಗಳು, ಕರಗದ ಸುತ್ತಲೂ ಕತ್ತಿ ಹಿಡಿದು ನಿಲ್ಲುವ ವೀರ ಕುಮಾರರು ಕರಗ ಕಾಲದಲ್ಲಿ ಆಚರಿಸುವ ನೇಮಗಳ ಬಗ್ಗೆ ಸಹ ರಾಜಣ್ಣನವರು ಮಾಹಿತಿ ಒದಗಿಸಿದರು.
ಈ ಸಂಧರ್ಭದಲ್ಲಿ ಧರ್ಮರಾಯ ದೇವಾಲಯದ ಆಡಳಿತ ಸಮಿತಿಯ ಗೌಡರಾದ ರಾಘವೇಂದ್ರ ಮತ್ತು ಯಜಮಾನರಾದ ಅರ್ಜುನಪ್ಪನವರ ಪಾಪಣ್ಣ, ಕೋಲಾರ ಕ್ರೀಡಾಸಂಘದ ತರಬೇತುದಾರರಾದ ಕೃಷ್ಣಮೂರ್ತಿ, ಸುರೇಶ್ ಬಾಬು, ನವೀನ್ ಉಪಸ್ಥಿತರಿದ್ದರು. ಮಕ್ಕಳಿಗೆ ಈ ಕಾರ್ಯಕ್ರಮ ಆಯೋಜಿಸಿ ಮಾಹಿತಿ ನೀಡಿದ ಧರ್ಮರಾಯಸ್ವಾಮಿ ದೇವಾಲಯದ ಆಡಳಿತ ಸಮಿತಿಯವರಿಗೆ, ಮಾಹಿತಿ ನೀಡಿದ ರಾಜಣ್ಣನವರಿಗೆ ತರಬೇತುದಾರ ಕೃಷ್ಣಮೂರ್ತಿಯವರು ಸಂಘದ ಪರವಾಗಿ ವಂದನೆಗಳನ್ನು ಸಲ್ಲಿಸಿದರು.