ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಂದ ಕೆಕೆಆರ್‍ಡಿಬಿ ಪ್ರಗತಿ ಪರಿಶೀಲನಾ ಸಭೆ ಇತರೆ ವಲಯಗಳಿಗೂ ಅನುದಾನ ನಿಗದಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ:ಪಿ.ರವಿಕುಮಾರ

ಕಲಬುರಗಿ.ಮಾ.30:ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ಈಗಾಗಲೇ ಅನುದಾನ ನೀಡುತ್ತಿರುವ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲದೆ, ಇತರೆ ಹೊಸವಲಯಗಳಿಗೂ ಅನುದಾನ ನಿಗದಿ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಂಗಳವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಡಳಿಯು ಅನೇಕ ವರ್ಷಗಳಿಂದ ಶಾಲಾ, ಕಾಲೇಜು, ಗ್ರಂಥಾಲಯ, ಪಿ.ಹೆಚ್.ಸಿ, ಸಿ.ಹೆಚ್.ಸಿ, ತಾಲ್ಲೂಕಾ ಆಸ್ಪತ್ರೆ, ಸಿಸಿ ರಸ್ತೆ, ಸೇತುವೆ ನಿರ್ಮಾಣ, ಕುಡಿಯುವ ನೀರು, ಕೆರೆಗಳ ನಿರ್ಮಾಣ ಸೇರಿದಂತೆ ಸಾಮಾಜಿಕ ಮತ್ತು ಸಾಮಾಜಿಕೇತರ ಕ್ಷೇತ್ರಗಳಿಗೆ ಹಣ ಮೀಸಲಿರಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿ ಹೊಂದಬೇಕಾದರೆ, ಇವುಗಳನ್ನು ಹೊರತುಪಡಿಸಿ ಬೇರೆ ವಲಯಗಳಿಗೂ ಅನುದಾನ ನಿಗದಿ ಮಾಡಬೇಕು ಎಂದು ಅವರು ಹೇಳಿದರು.
ಪ್ರಾದೇಶಿಕ ಆಯುಕ್ತರೂ ಆದ ಮಂಡಳಿಯ ಕಾರ್ಯದರ್ಶಿ ಎನ್.ವ್ಹಿ ಪ್ರಸಾದ ಅವರು ಮಾತನಾಡಿ, ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಮುಂತಾದ ವಲಯಗಳಿಗೂ ಅನುದಾನ ನಿಗದಿ ಮಾಡಬೇಕು. ಪ್ರಮುಖವಾಗಿ ಈ ಭಾಗದಲ್ಲಿ ಕೋಲ್ಡ್ ಸ್ಟೋರೇಜ್‍ಗಳ ಕೊರತೆ ಇದೆ. ಈ ಭಾಗದಲ್ಲಿ 5 ಕೋಲ್ಡ್ ಸ್ಟೋರೇಜ್‍ಗಳಿದ್ದು, ಕಲಬುರಗಿ ಜಿಲ್ಲೆಯಲ್ಲಿ 2 ಮಾತ್ರ ಇವೆ. ಮುಂದಿನ ದಿನಗಳಲ್ಲಿ ಕಲಬುರಗಿ ವಿಮಾನ ನಿಲ್ದಾಣದಿಂದ ವಿದೇಶಗಳಿಗೆ ಕಾರ್ಗೋ ವಿಮಾನಯಾನ (ಸರಕು ಸಾಗಾಣೆ ವಿಮಾನ) ಶುರುವಾಗಲಿದ್ದು, ಕೋಲ್ಡ್ ಸ್ಟೋರೇಜ್‍ಗಳ ನಿರ್ಮಿಸಿದರೆ ಅಳಂದದಲ್ಲಿ ಬೆಳೆಯುವ ದಾಳಿಂಬೆ,ದ್ರಾಕ್ಷಿ ಸೇರಿದಂತೆ ಜಿಲ್ಲೆಯಲ್ಲಿ ಬೆಳೆಯುವ ಹಣ್ಣು-ಹಂಪಲುಗಳನ್ನು ರಫ್ತು ಮಾಡಬಹುದಾಗಿದೆ. ಇದರಿಂದ ಜಿಲ್ಲೆಯ ರೈತರಿಗೆ ಬೇಗ ಹಾಳಾಗುವಂತಹ ಹಣ್ಣು-ತರಕಾರಿಗಳನ್ನು ಸಂರಕ್ಷಿಸಿಡಬಹುದಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಕಾರ್ಯದರ್ಶಿಗಳು, ಮಂಡಳಿ ವ್ಯಾಪ್ತಿಯ ಜಿಲ್ಲೆಗಳ ಕೆಲ ಶಾಸಕರು ಕೂಡ ಇತರೆ ವಲಯಗಳಿಗೂ ಅನುದಾನ ನೀಡಬೇಕು ಎಂದು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ತಿಳಿಸಿದರು.
ಮಂಡಳಿಯ ಮೈಕ್ರೋ-ಮ್ಯಾಕ್ರೋ ಯೋಜನೆ ಅಡಿಯಲ್ಲಿ ಕಲಬುರಗಿ ವಿಮಾನ ನಿಲ್ದಾಣ, ಜಯದೇವ ಹೃದ್ರೋಗ ಆಸ್ಪತ್ರೆಯಂತಹ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅದೇ ರೀತಿ ಈ ಭಾಗದ ಇತರೆ ಜಿಲ್ಲೆಗಳಲ್ಲೂ 100 ಕೋಟಿ ರೂಪಾಯಿಗಿಂತಲೂ ಹೆಚ್ಚು ವೆಚ್ಚದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಬೃಹತ್ ಕಾಮಗಾರಿಗಳ ನಡೆಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಾಗಿದೆ ಎಂದರು.
ಮಂಡಳಿಯಲ್ಲಿ ಪ್ರಸಕ್ತ 400 ಕೋಟಿಗಿಂತಲೂ ಹೆಚ್ಚು ಹಣ ಇದೆ. ಅದನ್ನು ಬಳಸಿಕೊಂಡು ಕಾಮಗಾರಿಗಳನ್ನು ಕೈಗೊಳ್ಳಿರಿ, ಮಂಡಳಿಗೆ ನೀಡಬೇಕಾದ ಬಾಕಿ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಳಿ ಜಂಟಿ ನಿರ್ದೇಶಕಿ ಪ್ರವೀಣ ಪ್ರಿಯಾ ಡೇವಿಡ್ ಹಾಗೂ ಮಂಡಳಿಯ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.