ರಾಜ್ಯದ ಮರಾಠಿಗರ ಹೋರಾಟಕ್ಕೆ ಧ್ವನಿಯಾಗುವೆ : ಜರಾಂಗೆ ಪಾಟೀಲ

ಭಾಲ್ಕಿ: ಏ.12:ರಾಜ್ಯದಲ್ಲಿ ಸುಮಾರು 40-50 ಲಕ್ಷ ಮರಾಠಿಗರು ಇದ್ದಾರೆ. ಹಲವು ವರ್ಷಗಳಿಂದ ಇಲ್ಲಿಯೆ ಮರಾಠಿಗರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಮರಾಠಿಗರ ಒಗ್ಗಟ್ಟಿನ ಲಾಭ ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿವೆ. ಹೊರತು ಮರಾಠಿಗರ ಮೀಸಲಾತಿ ಸೇರಿ ವಿವಿಧ ಬೇಡಿಕೆ ಈಡೇರುತ್ತಿಲ್ಲ ಎಂದು ಮರಾಠ ಸಮಾಜದ ಕ್ರಾಂತಿ ಸೂರ್ಯ ಮನೋಜ ಜರಾಂಗೆ ದಾದಾ ಪಾಟೀಲ್ ಆತಂಕ ವ್ಯಕ್ತ ಪಡಿಸಿದರು.
ಪಟ್ಟಣದ ಹೊರವಲಯದ ಹುಮನಾಬಾದ್ ರಸ್ತೆಯ ಪ್ರಯಾಗ ಫಂಕ್ಷನ್ ಹಾಲ್ ಸಮೀಪದ ಬಯಲು ಪ್ರದೇಶದಲ್ಲಿ ಸಕಲ ಮರಾಠ ಸಮಾಜದ ವತಿಯಿಂದ ಬುಧವಾರ ಏರ್ಪಡಿಸಿದ್ದ ಮರಾಠ ಸಮಾಜದ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅನ್ಯಾಯದ ವಿರುದ್ಧ ಹೋರಾಟ ನಡೆಸಲು ನಾನು ಸದಾ ಸಿದ್ಧನಿದ್ದೇನೆ. ರಾಜ್ಯದ ಎಲ್ಲ ಮರಾಠಿಗರು ಒಂದಾದರೆ, ನಿಮ್ಮೆಲ್ಲರ ನ್ಯಾಯಯುತ ಹೋರಾಟಕ್ಕೆ ಧ್ವನಿಯಾಗುತ್ತೇನೆ. ಎಲ್ಲ ಮರಾಠಿಗರು ಸೇರಿ ರಾಜ್ಯದಲ್ಲಿ ಬೃಹತ್ ಸಮಾವೇಶ ಏರ್ಪಡಿಸಿ ನಮ್ಮ ಧ್ವನಿಯನ್ನು ಆಳುವ ಸರಕಾರಕ್ಕೆ ಮುಟ್ಟಿಸೋಣ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ ಮಾತನಾಡಿ, ಬೀದರ್‍ನಲ್ಲಿ ಏ.12ರಂದು ನಡೆಯುವ ಸಭೆಯಲ್ಲಿ ಮರಾಠ ಸಮಾಜದ ಜನರನ್ನು ಸೇರಿಸಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳಲಾಗುತ್ತದೆ. ಮರಾಠ ಸಮಾಜ ಶಿಕ್ಷಣ, ಕೃಷಿ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದೆ. ನಮ್ಮ ಸಮುದಾಯವನ್ನು ಎಲ್ಲರೂ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಮೀಸಲಾತಿ ಸೇರಿ ನ್ಯಾಯಯುತ ವಿವಿಧ ಬೇಡಿಕೆ ಈಡೇರುತ್ತಿಲ್ಲ. ಹೀಗಾಗಿ ಮರಾಠ ಸಮುದಾಯದ ಎಲ್ಲ ಜನರು ಒಂದಾಗಿ ಶಕ್ತಿ ಪ್ರದರ್ಶಿಸಬೇಕು ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ ಬೆಂಗಳೂರು ಗೋಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ, ಶಿವಾಜಿ ಮಹಾರಾಜರ ಜೀವನ, ಚರಿತ್ರೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಅವರಲ್ಲಿನ ಸಾಹಸ, ಧೈರ್ಯ, ಶೌರ್ಯ, ದೇಶಪ್ರೇಮ, ದೇಶಭಕ್ತಿ, ಸಹೋದರತ್ವ ಪ್ರತಿಯೊಬ್ಬರೂ ಅನುಸರಿಸುವ ಮೂಲಕ ಅವರಿಗೆ ನಿಜವಾದ ಗೌರವ ಕೊಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಜನಾರ್ಧನ ಬಿರಾದಾರ, ನಂದುಕುಮಾರ ಸಾಳುಂಕೆ, ಅಶೋಕರಾವ ಸೋನಜಿ, ರಾಮರಾವ ವರವಟ್ಟಿಕರ್, ವಿಜಯಕುಮಾರ ಕಣಜಿಕರ, ಡಾ| ದಿನಕರ ಮೋರೆ, ಬಾಲಾಜಿ ಪಟೇಲ, ಪ್ರದೀಪ ಬಿರಾದಾರ, ತುಕಾರಾಮ ಮೋರೆ ಸೇರಿದಂತೆ ಹಲವರು ಇದ್ದರು.
ಡಾ| ದಿನಕರ ಮೋರೆ ಸ್ವಾಗತಿಸಿದರು. ತುಕಾರಾಮ ಮೋರೆ, ಎಸ್.ಪಟೇಲ್ ನಿರೂಪಿಸಿದರು. ಜನಾರ್ಧನ ಬಿರಾದಾರ ವಂದಿಸಿದರು.