ರಾಜ್ಯದ ಜೈಲುಗಳಿಗೆ ಹೆಚ್ಚಿದ ಭದ್ರತೆ

ಬೆಂಗಳೂರು,ಜೂ.೧-ಒಂಟಿ ಮಹಿಳೆ ಕೊಲೆ ಪ್ರಕರಣದ ವಿಚಾರಣಾಧೀನ ಕೈದಿ ಚಿಂತಾಮಣಿ ತಾಲೂಕು ಉಪ ಕಾರಾಗೃಹದಿಂದ ಪರಾರಿಯಾಗಿ ಸಿಕ್ಕಿಬಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಇಲಾಖೆಯು ರಾಜ್ಯದ ಎಲ್ಲಾ ಜೈಲುಗಳ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ.
ಜೈಲುಗಳ ಭದ್ರತೆಯ ಜವಾಬ್ದಾರಿಯನ್ನು ತರಬೇತಿ ನಿರತ (ಪ್ರೊಬೆಷನರಿ) ಪೊಲೀಸರಿಗೆ ಕೊಡದಂತೆ ಸೂಚನೆ ನೀಡಲಾಗಿದೆ.
ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭದ್ರತೆಯನ್ನು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಕೈಗೊಳ್ಳಲಾಗಿದೆ ಜೊತೆಗೆ ಕಾಂಪೌಂಡ್ ಸುತ್ತಮುತ್ತಲಿನ ಭದ್ರತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸೂಪರ್ ಡೆಂಟ್ ತಿಳಿಸಿದ್ದಾರೆ.
ಸಿಸಿಟಿವಿ ಅಳವಡಿಕೆ ಹೆಚ್ಚಿಸಿ ನಿಗಾವಹಿಸಲು ನುರಿತ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಮುಂದಾಗಿದ್ದು, ಪ್ರತಿ ಬಂಧಿಖಾನೆಯ ಬ್ಯಾರಕ್ ಬಳಿ ನಾಲ್ಬರು ಸಿಬ್ಬಂದಿ ನಿಯೋಜಿಸಲಾಗುತ್ತಿದೆ.
ಕೆಲಸಕ್ಕೆ ಹೋಗುವ ಕೈದಿಗಳ ಜೊತೆಯಲ್ಲಿ ಭದ್ರತಾ ಸಿಬ್ಬಂದಿ ಇರಲೇಬೇಕು ಎಂದು ತಾಕೀತು ಕೂಡ ಮೇಲಧಿಕಾರಿಗಳು ಮಾಡಿದ್ದಾರೆ.
ನಿರ್ಲಕ್ಷ್ಯ ಕಂಡು ಬಂದರೆ ತಕ್ಷಣ ಅಮಾನತು ಮಾಡುವುದಾಗಿ ಇಲಾಖೆ ಕೂಡ ಖಡಕ್ ಸೂಚನೆ ನೀಡಿದೆ. ಹೀಗಾಗಿ, ಸೆಂಟ್ರಲ್ ಜೈಲಿನಲ್ಲೀ ಹೊರಗಡೆ ಮತ್ತು ಒಳಗಡೆ ನಾಲ್ಕು ಹಂತದಲ್ಲಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ಚಿಂತಾಮಣಿ ತಾಲೂಕು ಉಪ ಕಾರಾಗೃಹದಿಂದ ಕೈದಿ ಶಂಕರಪ್ಪ ಪರಾರಿಯಾಗಿದ್ದ ಪ್ಲಂಬಿಂಗ್ ಕೆಲಸದಲ್ಲಿ ಪಳಗಿದ್ದ ಆತನನ್ನು ಪ್ರತಿದಿನ ಸ್ಯಾನಿಟೈಸರ್ ಹಾಗೂ ಸ್ವಚ್ಛತೆ ಮಾಡಲು ಜೈಲಿನಲ್ಲಿ ಬಳಸಿಕೊಳ್ಳುತ್ತಿದ್ದರು.
ಸ್ಯಾನಿಟೈಜ್ ಮಾಡುವ ನೆಪ ಹಾಗೂ ನೀರಿನ ಪೈಪ್ ಸ್ವಚ್ಛಗೊಳಿಸುವ ನೆಪದಲ್ಲಿ ಜೈಲಿನ ೨೦ ಅಡಿ ಪೈಪನ್ನು ಹತ್ತಿ ಜೈಲಿನ ಗೊಡೆಯನ್ನು ಧುಮುಕಿ ಶಂಕರಪ್ಪ ಪರಾರಿಯಾಗಿ ಹತ್ತಿರದಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.