ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ನೀಡಲು ಕಾಂಗ್ರೆಸ್‍ಗೆ ಆಗುತ್ತಿಲ್ಲ: ಕಟೀಲ್

ಕಲಬುರಗಿ,ಜೂ.23-ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ನೀಡಲು ಕಾಂಗ್ರೆಸ್‍ಗೆ ಆಗುತ್ತಿಲ್ಲ. ಅದಕ್ಕಾಗಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಕ್ಕಿಯನ್ನು ಮೋದಿಯವರಿಗೆ ಕೇಳಿ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರಾ ಅಥವಾ ಕಾಂಗ್ರೆಸ್ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಈ ಮಾತನ್ನು ಹೇಳಿತ್ತ ಎಂದು ಪ್ರಶ್ನಿಸಿದ ಅವರು ಎಲ್ಲೂ ಹೇಳಿಲ್ಲ, ಈಗೇಕೆ ಕೇಂದ್ರ ಸರ್ಕಾರದ ಮೇಲೆ, ಬಿಜೆಪಿ ಮೇಲೆ ಆರೋಪ ಮಾಡಬೇಕು ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದಿಂದ 5 ಕೆಜಿ ಮತ್ತು ಸಿದ್ದರಾಮಯ್ಯನವರು 10 ಕೆಜಿ ಅಂದ್ರೆ, 15 ಕೆಜಿ ಅಕ್ಕಿ ಕಾಂಗ್ರೆಸ್ ಸರ್ಕಾರ ನೀಡುತ್ತದೆ ನಾವು ತಿಳಿದುಕೊಂಡಿದ್ದೆವು. ಆದರೆ, ಕಾಂಗ್ರೆಸ್‍ಗೆ ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ನೀಡಲು ಆಗುತ್ತಿಲ್ಲ, ಕಾಂಗ್ರೆಸ್ ಅದಕ್ಕೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ನೀಡುತ್ತಿದೆ. ರಾಜ್ಯ ಸರ್ಕಾರ ನುಡಿದಂತೆ ತಾನು ಪ್ರತ್ಯೇಕವಾಗಿ 10 ಕೆ.ಜಿ ನೀಡಿದರೆ ಒಟ್ಟು 15 ಕೆಜಿ ಅಕ್ಕಿ ಬಡ ಜನರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಕೇಂದ್ರಕ್ಕೆ ಕರ್ನಾಟಕವೊಂದೇ ಮುಖ್ಯವಲ್ಲ. ಇತರ ರಾಜ್ಯಗಳಿಗೆ ಅಕ್ಕಿ ಪೂರೈಸುವ ಜವಾಬ್ದಾರಿ ಇದೆ. ಕಾಂಗ್ರೆಸ್ ಸರಕಾರ ಪ್ರತಿ ಬಡ ಕುಟುಂಬಗಳಿಗೆ 10 ಕೆ.ಜಿ. ಉಚಿತ ಅಕ್ಕಿ ನೀಡುವ ಮುನ್ನ ಪ್ರಧಾನಿ ಅಥವಾ ಕೇಂದ್ರ ಆಹಾರ ಸಚಿವರೊಂದಿಗೆ ಚರ್ಚಿಸಿಲ್ಲ. ಹೀಗಾಗಿ ಬೇಕಾದ ಅಕ್ಕಿ ಕೊಡುವ ಯೋಜನೆಗೆ ಅಕ್ಕಿಯನ್ನು ತಾನೇ ಹೊಂದಿಸಿಕೊಳ್ಳಬೇಕು ಎಂದರು.
ಕೇಂದ್ರ ಸರಕಾರ ರಾಜ್ಯದೊಂದಿಗೆ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಬದಲಾಗಿ ಸಿದ್ದರಾಮಯ್ಯ ಅವರೇ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಸರಕಾರ ಜಾರಿಗೊಳಿಸಿದ್ದ ಮತಾಂತರ ನಿಷೇಧ ಕಾಯಿದೆ, ಗೋಹತ್ಯೆ ನಿಷೇಧ ಕಾಯಿದೆ, ಪಠ್ಯ ಪುಸ್ತಕ ಪರಿಷ್ಕರಣೆಯನ್ನು ವಾಪಸ್ ಪಡೆದಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ ಎಂದರು.
ಕೇಂದ್ರ ಆಹಾರ ಸಚಿವರು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅವರ ಭೇಟಿಗೆ ಸಮಯ ನೀಡದಿರುವ ಬಗ್ಗೆ ಕಟೀಲ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ, ಶಾಸಕ ಬಸವರಾಜ ಮತ್ತಿಮೂಡ, ಮುಖಂಡರಾದ ಶಿವರಾಜ ಪಾಟೀಲ ರದ್ದೇವಾಡಿ, ಅಮರನಾಥ ಪಾಟೀಲ ಸೇರಿದಂತೆ ಇತರರು ಉಪಸ್ಥಿತಿದರು.