ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ದಿ ಮಾಡದೇ ಕಾಲಹರಣ ಮಾಡುತ್ತಿದೆ:ನಿರಾಣಿ

ಬೀದರ್:ಮೇ.30: ಕಲ್ಯಾಣ ಕರ್ನಾಟಕದ ಸಮಗ್ರ ವಿಕಾಸಕ್ಕಾಗಿ ವಿಧಾನ ಪರಿಷತ್‍ನಲ್ಲಿ ಧ್ವನಿ ಎತ್ತುವ ನೇತಾರರು ಅಗತ್ಯವಿದ್ದು, ಈ ಹಿಂದೆ ಮೇಲ್ಮನೆಯಲ್ಲಿ ಹೋರಾಟ, ಪ್ರತಿಭಟನೆ ಹಾಗೂ ಪ್ರಶ್ನೋತ್ತರ ಮೂಲಕ ಈ ಭಾಗಕ್ಕೆ ಪ್ರಾಮಾಣಿಕವಾಗಿ ನ್ಯಾಯ ಕೊಡಿಸುವಲ್ಲಿ ಶ್ರಮಿಸಿದ ಬಿಜೆಪಿ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ಚಲಾಯಿಸುವಂತೆ ಮಾಜಿ ಸಚಿವರು ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಮನವಿ ಮಾಡಿದರು.
ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಈ ಭಾಗದ ಪ್ರಜ್ಞಾವಂತ ಮತದಾರರೆನಿಸಿರುವ ಪದವಿಧರ ಮತದಾರ ಬಾಂಧವರು ಹಿಂದೆ ನಮ್ಮ ಪಕ್ಷದ ಉಮೆದುವಾರರಾಗಿದ್ದ ಡಾ.ತಂಗಾ, ಡಾ.ಬಸವರಾಜ ಪಾಟೀಲ ಸೇಡಂ, ಅಷ್ಟಗಿ ಹಾಗೂ ಅಮರನಾಥ ಪಾಟೀಲ ಅವರಿಗೆ ಮನ್ನಣೆ ನೀಡಿದ್ದಾರೆ. ಈ ಬಾರಿ ಮತ್ತೆ ಎರಡನೇ ಬಾರಿಗೆ ಸ್ಪರ್ಧಿಸಿರುವ ಅಮರನಾಥ ಪಾಟೀಲರಿಗೆ ಮತ ಚಲಾಯಿಸಬೇಕೆಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಕಳೆದೊಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಕಾಲಹರಣ ಮಾಡುತ್ತಿದೆ. ಒಂದು ವರ್ಷದಲ್ಲಿ ಯಾವುದೇ ಶಂಕುಸ್ಥಾಪನೆ ಮಾಡದೇ ಇರುವುದು ವಿಪರ್ಯಾಸ. ನಮ್ಮ ಕಾರ್ಯಾವಧಿಯಲ್ಲಿ ಕೈಗೊಂಡ ಕಾಮಗಾರಿಗಳಿಗೆ ಉದ್ಘಾಟನೆ ಮಾಡುತ್ತಿರುವರು. ಮಳೆಗಾಲ ಸಮಿಪಿಸಿದೆ. ಸಮರ್ಪಕ ಬೀಜ ಹಾಗೂ ಗೊಬ್ಬರ ಪುರೈಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಿಂದೆ ನಮ್ಮ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ ಸಚಿವರಾಗಿದ್ದ ಕೆ.ಎಸ್ ಈಶ್ವರಪ್ಪ ಅವರ ಮೇಲೆ ದಿ.ಸಂತೋಷ ಪಾಟೀಲರ ಆತ್ಮಹತ್ಯೆ ಆರೋಪ ಬಂದರೆ ಕೂಡಲೇ ರಾಜಿನಾಮೆ ನೀಡಿದ್ದರು. ಆದರೆ, ಇತ್ತಿಚೀಗೆ ವಾಲ್ಮಿಕಿ ನಿಗಮದ ಅಧಿಕಾರಿ ಚಂದ್ರಶೇಖರ ಆತ್ಮಹತ್ಯೆ ಮಾಡಿಕೊಂಡಿದ್ದು, ಅದರಲ್ಲಿ ಸಚಿವ ಬಿ.ನಾಗೇಂದ್ರ ಅವರ ಹೆಸರು ಇರುವ ಕಾರಣ ಅವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜಿನಾಮೆ ನೀಡಬೇಕು. ಇಲ್ಲ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜಿನಾಮೆ ಪಡೆದುಕೊಳ್ಳಲಿ ಎಂದರು.
ಪ್ರಜ್ವಲ್ ರೇವನ್ಣ ಅವರ ಪೆಂಡ್ರೈವ್ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಜೆಡಿಎಸ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ. ಎಮ್.ಎಲ್.ಸಿ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆದಿದ್ದು, ಪ್ರಜ್ವಲ್ ಪೆಂಡ್ರೈವ್ ಕೇಸ್ ಈ ಎಮ್.ಎಲ್.ಸಿ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಕೇಂದ್ರ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯರು ಹಾಗೂ ಈಶಾನ್ಯ ಪದವಿಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ,ಎಂ.ಎಲ್.ಸಿ.ರಘುನಾಥ ಮಲ್ಕಾಪೂರೆ, ಎಮ್.ಎಲ್.ಸಿ ಚುನಾವಣಾ ಉಸ್ತುವಾರಿ ಬಾಬುವಾಲಿ, ನಗರ ಸಭೆ ಸದಸ್ಯ ಶಶಿ ಹೊಸಳ್ಳಿ, ಪಕ್ಷದ ಪ್ರಮುಖರಾದ ರೇವಣಸಿದ್ದಪ್ಪ ಜಲಾದೆ, ಬಸವರಾಜ ಪವಾರ, ಗುರುನಾಥ ರಾಜಗೀರಾ, ಶ್ರೀನಿವಾಸ್ ಚೌಧರಿ ಪತ್ರಿಕಾ ಗೋಷ್ಟಿಯಲ್ಲಿದ್ದರು.