ರಾಜ್ಯದ ಕರಾವಳಿಯಲ್ಲಿ ‌ಇನ್ನು ಮೂರು ದಿನ ಭಾರೀ ಮಳೆ

ಬೆಂಗಳೂರು, ಮೇ.21-ರಾಜ್ಯದ ಹಲವೆಡೆ ಮೋಡ ಮುಸುಕಿದ ವಾತಾವರಣವಿದ್ದು ಕರಾವಳಿ ಭಾಗದಲ್ಲಿ ಇಂದಿನಿಂದ ಮೇ 25ರವರೆಗೆ ಭಾರಿ ಮಳೆಯಾಗಲಿದೆ.
ದಕ್ಷಿಣ ಒಳನಾಡಿನಲ್ಲಿ 3 ದಿನಗಳ ಕಾಲ ಮಳೆಯಾಗಲಿದ್ದು. ಬೆಂಗಳೂರು, ರಾಮನಗರ, ಚಾಮರಾಜನಗರ ಜಿಲ್ಲೆ ಮತ್ತು ಮಲೆನಾಡು ಭಾಗಗಳಲ್ಲಿ ಹೆಚ್ಚಿನ ಮಳೆ ಬೀಳಲಿದೆ ಎಂದು ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಬಹುತೇಕ ಕರಾವಳಿಯ ಎಲ್ಲಾ ಭಾಗದಲ್ಲೂ ಮಳೆ ಆಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಈಗಾಗಲೇ ಮಳೆ ಆಗಿದೆ. ಕೋಲಾರದಲ್ಲಿ 10 ಸೆಂ.ಮೀ ಮಳೆ ಆಗಿದೆ. ಭಟ್ಕಳ 3 ಸೆಂ.ಮೀ, ಸುಳ್ಯ 3 ಸೆಂ.‌ಮೀ, ಆನೆಕಲ್ಲು 3 ಸೆಂ.ಮೀ ಮಳೆ ಆಗಿದೆ ಎಂದು ಅವರು ಮಾಹಿತಿ ನೀಡಿದರು.
ತೌಕ್ತೆ ಚಂಡಮಾರುತದ ನಂತರ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಹೊತ್ತಿನಲ್ಲಿ ಮಳೆ ಸುರಿಯುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯವ್ಯಾಪಿ ಲೆಕ್ಕಾಚಾರದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದೆಯಾದರೂ ಮಲೆನಾಡು, ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣ ಹಾಗೂ ತಂಪು ಹವೆಯ ಪರಿಣಾಮ ಮಳೆಗಾಲದ ವಾತಾವರಣದಂತೆಯೇ ಪರಿಸರ ಕಾಣಿಸುತ್ತಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆಯಿದ್ದು, ಅರುಣಾಚಲ ಪ್ರದೇಶ ಭಾಗದಲ್ಲೂ ಸಾಧಾರಣದಿಂದ ಉತ್ತಮ ಮಳೆ ಸುರಿಯಲಿದೆ. ಅದೇರೀತಿ ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ, ತ್ರಿಪುರಾ ಮತ್ತು ಕೇರಳ ಪ್ರಾಂತ್ಯಗಳಲ್ಲೂ ಉತ್ತಮ ಮಳೆ ಸುರಿಯುವ ಸಂಭವವಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಉತ್ತರಾಖಂಡ, ಪಶ್ಚಿಮ ಬಂಗಾಳದ ಕೆಲ ಭಾಗ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ತುಂತುರು ಮಳೆ ಸುರಿಯಬಹುದಾಗಿದ್ದು, ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ ಹಾಗೂ ತೆಲಂಗಾಣದ ಒಂದಷ್ಟು ಪ್ರದೇಶಗಳಲ್ಲೂ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದೆನ್ನಲಾಗಿದೆ. ಏತನ್ಮಧ್ಯೆ ರಾಜಸ್ಥಾನದ ಪಶ್ಚಿಮ ಭಾಗದಲ್ಲಿ ಹಾಗೂ ಗುಜರಾತ್ ರಾಜ್ಯದ ಪಶ್ಚಿಮ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶ 40ಡಿಗ್ರಿ ಸೆಲ್ಸಿಯಸ್ ದಾಟಲಿದೆ ಎಂಬುದನ್ನೂ ವರದಿಗಳು ತಿಳಿಸಿವೆ.