ರಾಜ್ಯದ ಐದು ಜಿಲ್ಲೆಯಲ್ಲಿ ನಾಳೆ ಲಸಿಕೆ ನೀಡಿಕೆ ತಾಲೀಮು

ಬೆಂಗಳೂರು,ಜ.೧- ಕೇಂದ್ರ ಸರ್ಕಾರ ನಾಳೆಯಿಂದ ವಿವಿಧ ರಾಜ್ಯಗಳಲ್ಲಿ ಆರಂಭಿಸಲಿರುವ ಕೋವಿಡ್ ಲಸಿಕೆಯ ಪೂರ್ವಾಭ್ಯಾಸಕ್ಕೆ ರಾಜ್ಯದ ಐದು ಜಿಲ್ಲೆಗಳು ಆಯ್ಕೆಯಾಗಿದ್ದು ಲಸಿಕೆಯ ತಾಲೀಮಿಗೆ ಈ ಜಿಲ್ಲೆಗಳಲ್ಲಿ ಅಂತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರ ನಿನ್ನೆ ಆದೇಶ ಹೊರಡಿಸಿ ಜ. ೨ ರಿಂದ ಎಲ್ಲ ರಾಜ್ಯಗಳಲ್ಲು ಲಸಿಕೆಯ ಪೂರ್ವಾಭ್ಯಾಸ ನಡೆಸುವುದಾಗಿ ಹೇಳಿತ್ತು. ಅದರಂತೆ ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಕಲಬುರಗಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಲಸಿಕೆಯ ತಾಲೀಮು ಕಾರ್ಯಾಚರಣೆ ನಾಳೆಯಿಂದ ನಡೆಯಲಿದೆ.
ಈ ಸಂದರ್ಭದಲ್ಲಿ ನಿರ್ವಹಣೆ ಸೇರಿದಂತೆ ಲಸಿಕೆ ವಿತರಣೆಗೆ ಸಂಬಂಧಿಸಿದ ವಿವಿಧ ಪ್ರಕ್ರಿಯೆಗಳನ್ನು ಪರೀಕ್ಷಿಸಲಾಗುವುದು. ಹಾಗೆಯೇ ಫಲಾನುಭವಿಗಳ ಮಾಹಿತಿಯನ್ನು ಈ ವೇಳೆ ದಾಖಲಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಲಸಿಕೆ ಪಡೆಯುವವರ ದಾಖಲಾತಿಗಳ ಪರಿಶೀಲನೆ ಸೇರಿದಂತೆ ಎಲ್ಲ ರೀತಿಯ ಪ್ರಕ್ರಿಯೆಗಳ ಬಗ್ಗೆ ಈ ಅಣಕು ಕಾರ್ಯಾಚರಣೆಯಲ್ಲಿ ತಿಳಿಸಿಕೊಡಲಾಗುತ್ತದೆ. ಲಸಿಕೆ ವಿತರಣೆ ವೇಳೆ ಉಂಟಾಗಬಹುದಾದ ಸವಾಲುಗಳನ್ನು ಗುರುತಿಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ.
ರಾಜ್ಯದಲ್ಲಿ ಲಸಿಕೆ ಸಂಗ್ರಹ ಹಾಗೂ ವಿತರಣೆಗೆ ಈಗಾಗಲೇ ಸಿಬ್ಬಂದಿ ಹಾಗೂ ಕೇಂದ್ರಗಳನ್ನು ಗುರುತಿಸಲಾಗಿದೆ. ಲಸಿಕೆ ಸಂಗ್ರಹಣೆಗೆ ೨೭೮೦ ಶಿಥಲೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಲಸಿಕೆ ನೀಡಲು ರಾಜ್ಯದಲ್ಲಿ ೨೧,೪೫೧ ಕೇಂದ್ರಗಳನ್ನು ಗುರುತಿಸಲಾಗಿದೆ. ಹಾಗೆಯೇ ಲಸಿಕೆ ಹಾಕಲು ೧೦ ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
ಬೆಂಗಳೂರು, ಬೆಳಗಾವಿ, ಚಿತ್ರದುರ್ಗ, ಮೈಸೂರು, ಮಂಗಳೂರು, ಕಲಬುರಗಿ ಮತ್ತು ಬಾಗಲಕೋಟೆಯಲ್ಲಿ ಲಸಿಕಾ ಉಗ್ರಾಣಗಳನ್ನು ಸಜ್ಜುಗೊಳಿಸಲಾಗಿದೆ.