ರಾಜ್ಯದ ಏಳು ವಿ.ವಿ.ಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಞಣ ನೀತಿ ಜಾರಿ : ಡಾ. ದಯಾನಂದ ಅಗಸರ್

ಕಲಬುರಗಿ.ನ.10:ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ರಾಜ್ಯದ ಸುಮಾರು ಏಳು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪದ್ಧತಿ ಪ್ರಾರಂಭಗೊಂಡಿದೆ ಮತ್ತು ವಿದ್ಯಾರ್ಥಿ ಕೇಂದ್ರಿತ ಸುಂದರ ಭವಿಷ್ಯ ನಿರ್ಮಾಣದ ವ್ಯವಸ್ಥೆ ಆರಂಭಗೊಂಡಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ. ದಯಾನಂದ ಅಗಸರ್ ಹೇಳಿದರು.
ಕಲಬುರಗಿ ಆಕಾಶವಾಣಿ ಕೇಂದ್ರದ ‘ಜೊತೆ ಜೊತೆಯಲಿ’ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ನ.10 ರಂದು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಜ್ಞಾನಾಧಾರಿತ, ಕೌಶಲ್ಯಾಧಾರಿತ ಮತ್ತು ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆಯಿಂದ ಅಂತರಾಷ್ಟ್ರೀಯ ಮಟ್ಟದ ಶಿಕ್ಷಣ ನಮ್ಮ ದೇಶದಲ್ಲಿ ಲಭ್ಯವಾಗುತ್ತಿದೆ. ಕಲ್ಯಾಣ ಕರ್ನಾಟಕದ ಗುಲಬರ್ಗಾ ವಿಶ್ವವಿದ್ಯಾಲಯದ 30 ಸಾವಿರ ವಿದ್ಯಾರ್ಥಿಗಳು ಹೊಸ ಶಿಕ್ಷಣ ವ್ಯವಸ್ಥೆಗೆ ಒಳಪಟ್ಟಿದ್ದಾರೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ವಿವಿಧ ಹಂತಗಳ ಕಾರ್ಯಾಗಾರ, ತರಬೇತಿ ನೀಡಿ ಶಿಕ್ಷಕರನ್ನು ಕೂಡಾ ಸಜ್ಜುಗೊಳಿಸಿದ್ದು ಮೊದಲ ಹಂತದಲ್ಲಿ ಶಿಕ್ಷಣ ವ್ಯವಸ್ಥೆ ಜಾರಿ ಮಾಡಿದ ವಿ. ವಿ. ಗಳ ಸಾಲಿನಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಕೂಡಾ ನಿಂತಿದೆ ಎಂದು ಡಾ. ದಯಾನಂದ ಅಗಸರ್ ಹೇಳಿದರು.
ಮೆಕಾಲೆ ಶಿಕ್ಷಣ ಪದ್ಧತಿಯಲ್ಲಿ ಮುಂದುವರೆಯುತ್ತಿದ್ದ ಭಾರತ ಅಪ್ಪಟ ಭಾರತೀಯ ಸಾಂಸ್ಕøತಿಕ ಮೌಲ್ಯಗಳ ಶಿಕ್ಞಣ ನೀತಿಯಿಂದಾಗಿ ಇಂದು ಶ್ರೇಷ್ಠ ಭಾರತವಾಗಿ ವಿಶ್ವಗುರು ಕಲ್ಪನೆ ಸಾಕಾರಗೊಳ್ಳುತ್ತಿದೆ. ಮೌಲ್ಯಯುತ ಶಿಕ್ಷಣ ಸಿಗುವ ಹೇರಳ ಅವಕಾಶ ಬಂದಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಡಾ. ಹರೀಶ್ ರಾಮಸ್ವಾಮಿ ಹೇಳಿದರು. ರಾಯಚೂರು ವಿಶ್ವವಿದ್ಯಾಲಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಡಿ 22 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಮುಂದಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ರೋಹಿಣಾಕ್ಷ ಶಿರ್ಲಾಲು, ಕಲಬುರಗಿ ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಶಶಿಶೇಖರ ರೆಡ್ಡಿ ಶಿಕ್ಷಣ ತಜ್ಞ ಪ್ರೊ.ನರೇಂದ್ರ ಬಡಶೇಷಿ, ಈಶಾನ್ಯ ಕರ್ನಾಟಕ ಶಿಕ್ಷಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸಿ. ಎಸ್. ಮುಧೋಳ, ಜೇವರ್ಗಿಯ ಸಾಜನ್ ಪಟೇಲ್, ಸೇಡಂ ಗೌಡನಳ್ಳಿಯ ನರಸ ರೆಡ್ಡಿ, ಯಾದಗಿರಿಯ ವೆಂಕಟೇಶ ಕುಂಬಾರ, ಸುರಪುರದ ರಾಘವೇಂದ್ರ ಭಕ್ರಿ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಡಾ.ಸದಾನಂದ ಪೆರ್ಲ ನಡೆಸಿಕೊಟ್ಟರು. ಸಂಗಮೇಶ್, ಲಕ್ಷ್ಮೀಕಾಂತ್ ಪಾಟೀಲ್, ಲಕ್ಷ್ಮೀ ಮಯೂರ್ ಮತ್ತು ಮೊಹ್ಮದ್ ಅಬ್ದುಲ್ ರವೂಫ್ ನೆರವಾದರು ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಅನಿಲ್ ಕುಮಾರ್ ಎಚ್. ಎನ್. ತಿಳಿಸಿದ್ದಾರೆ.