ರಾಜ್ಯದ ಏಳು ಮಂದಿಗೆ ಬ್ರಿಟನ್ ಸೋಂಕು

ಬೆಂಗಳೂರು, ಡಿ. ೩೦- ಬ್ರಿಟನ್‌ನಿಂದ ರಾಜ್ಯಕ್ಕೆ ಆಗಮಿಸಿರುವವರ ಪೈಕಿ ಇದುವರೆಗೂ ೭ ಮಂದಿಯಲ್ಲಿ ರೂಪಾಂತರ ವೈರಸ್ ಇರುವುದು ದೃಢಪಟ್ಟಿದೆ. ಈ ರೂಪಾಂತರ ವೈರಸ್ ದೃಢಪಟ್ಟಿರುವವರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆಯೆ ಅವರ ಸಂಪರ್ಕಿತರನ್ನು ಗುರುತಿಸಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು
ಹಾಗೂ ಅವರ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್ ಪತ್ತೆಯಾಗಿದ್ದು, ಈ ೭ ಜನರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಸಾಂಸ್ಥಿತ ಕ್ವಾರಂಟೈನ್ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದರು.
ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರ ಪೈಕಿ ಬೆಂಗಳೂರಿನಲ್ಲಿ ೩ ಮಂದಿಗೆ, ಶಿವಮೊಗ್ಗದಲ್ಲಿ ನಾಲ್ವರಿಗೆ ರೂಪಾಂತರ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ ರೂಪಾಂತರ ವೈರಸ್ ದೃಢಪಟ್ಟಿರುವ ಮೂವರ ಸಂಪರ್ಕದಲ್ಲಿ ೩೯ ಮಂದಿ ಇದ್ದು, ಇವರನ್ನೆಲ್ಲಾ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರ ಕೊರೊನಾ ವರದಿ ನೆಗೆಟಿವ್ ಬಂದಿರುವುದು ಸಮಧಾನದ ವಿಚಾರ. ಹಾಗೆಯೇ ಶಿವಮೊಗ್ಗಕ್ಕೆ ಬಂದಿದ್ದ ಬ್ರಿಟನ್ ಪ್ರಯಾಣಿಕರ ಪೈಕಿ ೭ ಜನ ಸಂಪರ್ಕದಲ್ಲಿದ್ದು ಅವರನ್ನು ಸಹ ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಮೂವರಿಗೆ ಕೊರೊನಾ ದೃಢಪಟ್ಟಿದೆ ಎಂದರು.
ಈ ಕೊರೊನಾ ದೃಢಪಟ್ಟಿರುವ ಮೂವರನ್ನು ಜನೆಟಿಕ್ ಸೀಕ್ವೇನ್ಸ್ ಪರೀಕ್ಷೆಗೆ ಒಳಪಡಿಸಿ ಇವರಲ್ಲೂ ರೂಪಾಂತರ ವೈರಸ್ ಇದೆಯೇ, ಇಲ್ಲವೇ ಹಳೆಯ ವೈರಸ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದರು.
ಸದ್ಯ ಈ ಎಲ್ಲ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಬ್ರಿಟನ್‌ನಿಂದ ರಾಜ್ಯಕ್ಕೆ ಇದುವರೆಗೂ ಬಂದಿದ್ದವರ ಪೈಕಿ ೧೬೧೪ ಪ್ರಯಾಣಿಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ೨೬ ಮಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು .ಈ ೨೬ ಮಂದಿಯನ್ನು ರೂಪಾಂತರ ವೈರಸ್ ಪತ್ತೆಗಾಗಿ ಜನೆಟಿಕ್ ಸೀಕ್ವೇನ್ಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ೨೬ ಮಂದಿಯಲ್ಲಿ ೭ ಜನರಲ್ಲಿ ರೂಪಾಂತರ ವೈರಸ್ ದೃಢಪಟ್ಟಿದೆ ಎಂದರು.
ರೂಪಾಂತರ ವೈರಸ್ ಪತ್ತೆಯಾಗಿರುವವರ ಸಂಪರ್ಕದಲ್ಲಿದ್ದವರು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಲೇಬೇಕಾಗುತ್ತದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಅವರು ಹೇಳಿದರು.
ರೂಪಾಂತಾರ ವೈರಸ್ ತೀವ್ರ ಪರಿಣಾಮ ಹೊಂದಿಲ್ಲದೆ ಇದ್ದರೂ ಹರಡುವ ಪ್ರಮಾಣ ಶೇ. ೭೦ ರಷ್ಟು ವೇಗ ಹೊಂದಿರುವುದರಿಂದ ರೋಗ ಹರಡುವುದನ್ನು ತಡೆಯಲು ಎಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಆರಂಭದಲ್ಲೇ ರೋಗ ಹರಡುವಿಕೆಯನ್ನು ತಡೆಯಲೇಬೇಕು. ಹಾಗಾಗಿ ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಬ್ರಿಟನ್‌ನಿಂದ ರಾಜ್ಯಕ್ಕೆ ಕಳೆದ ೨ ತಿಂಗಳಲ್ಲಿ ೨೫೦೦ ಮಂದಿ ಬಂದಿದ್ದರು. ಇವರಲ್ಲಿ ೧೬೧೪ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಉಳಿದವರನ್ನು ಪತ್ತೆಹಚ್ಚಿ ಅವರನ್ನು ತಪಾಸಣೆಗೆ ಒಳಪಡಿಸಿ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅದರಂತೆ ರಾಜ್ಯದ ಗೃಹ ಇಲಾಖೆ ಬ್ರಿಟನ್‌ನಿಂದ ಬಂದವರ ಪತ್ತೆಗೆ ಕ್ರಮ ಕೈಗೊಂಡಿದೆ. ಇಂತಹವರನ್ನು ಪತ್ತೆಹಚ್ಚಿ ಕೊರೊನಾ ತಪಾಸಣೆಗಾಗಿ ಆರೋಗ್ಯ ಇಲಾಖೆಯ ಸುಪರ್ದಿಗೆ ಒಳಪಡಿಸುವ ಕೆಲಸ ನಡೆದಿದೆ ಎಂದರು.
ಕಳೆದ ೧೫ ದಿನಗಳಿಂದ ಬ್ರಿಟನ್‌ನಿಂದ ಬಂದವರೇ ರೂಪಾಂತರ ವೈರಸ್‌ನ್ನು ಹರಡುವವರು. ಹಾಗಾಗಿ ಮೊದಲಿಗೆ ಅವರ ಪರೀಕ್ಷೆ ನಡೆಸಿದ್ದೇವೆ. ನಂತರ ಉಳಿದವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು.
ನೈಟ್ ಕರ್ಫ್ಯೂ ಮುಗಿದ ಅಧ್ಯಾಯ
ರಾಜ್ಯದಲ್ಲಿ ರೂಪಾಂತರ ಕೊರೊನಾ ವೈರಸ್ ಪತ್ತೆಯಾಗಿರುವುದರಿಂದ ನೈಟ್ ಕರ್ಫ್ಯೂವನ್ನು ಮತ್ತೆ ಜಾರಿ ಮಾಡುವ ಪ್ರಸ್ತಾವಗಳನ್ನು ತಳ್ಳಿ ಹಾಕಿದ ಅವರು, ನೈಟ್ ಕರ್ಫ್ಯೂ ಮುಗಿದ ಅಧ್ಯಯ ಈ ಬಗ್ಗೆ ಮುಖ್ಯಮಂತ್ರಿಗಳೇ ತೀರ್ಮಾನ ತೆಗೆದುಕೊಂಡಿದ್ದಾರೆ. ಹಾಗಾಗಿ ನೈಟ್ ಕರ್ಫ್ಯೂ ಜಾರಿ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಹೊಸ ಪ್ರಭೇದದ ಕೊರೊನಾ ಸೋಂಕು ಕಾಣಿಸಿಕೊಂಡ ಜನರ ಪೈಕಿ ಹಲವರಿಗೆ ಮನೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಮತ್ತೆ ಕೆಲವರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಂಕಿತರು ಪತ್ತೆಯಾಗಿರುವ ಮನೆಗಳ ಸುತ್ತಮುತ್ತ ಬ್ಯಾರಿಕೇಡ್ ಹಾಕಿ ಕಟ್ಟೆಚ್ಚರ ವಿಧಿಸಲಾಗಿದೆ
೨೦ ಮಂದಿಗೆ ರೂಪಾಂತರ ಸೋಂಕು:
ಲಂಡನ್ನಿಂದ ಭಾರತಕ್ಕೆ ಬಂದ ಪ್ರಯಾಣಿಕರ ಪೈಕಿ ಸರಿಸುಮಾರು ೨೦ ಮಂದಿಗೆ ರೂಪಾಂತರ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ
ದೆಹಲಿಯಲ್ಲಿ ೮, ಕರ್ನಾಟಕದಲ್ಲಿ ೭, ಕೊಲ್ಕೊತ್ತಾದಲ್ಲಿ ೧, ಪುಣೆ ೧, ಸಿಸಿಎಂಬಿ ೨, ಐಜಿಐಬಿ ೧ ಸೇರಿದಂತೆ ಒಟ್ಟು ೨೦ ಜನರಿಗೆ ಹೊಸದಾಗಿ ರೂಪಾಂತರ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಎಚ್ಚರಿಕೆಗೆ ಸೂಚನೆ:
ಇಂಗ್ಲೆಂಡ್‌ನಿಂದ ಬಂದ ಅನೇಕ ಮಂದಿಯಲ್ಲಿ ರೂಪಾಂತರ ಕೊರೊನಾ ಸೋಂಕು ಕಾಣಿಸಿಕೊಂಡಲ್ಲಿ ಅವರ ಸಂಪರ್ಕಕ್ಕೆ ಬಂದಿರುವ ಕುಟುಂಬದ ಸದಸ್ಯರು ಸ್ನೇಹಿತರು ಸೇರಿದಂತೆ ಎಲ್ಲರೂ ಎಚ್ಚರಿಕೆ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ರೂಪಾಂತರ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಸೋಂಕಿತರ ಸಂಪರ್ಕದಲ್ಲಿರುವ ಎಲ್ಲರೂ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯದ ಕಡೆಗೆ ಗಮನ ವಹಿಸುವಂತೆ ಸೂಚಿಸಲಾಗಿದೆ.
ನವಂಬರ್ ೨೫ ರಿಂದ ಡಿಸೆಂಬರ್ ೨೩ ರವರೆಗೆ ಇಂಗ್ಲೆಂಡ್ನಿಂದ ಭಾರತಕ್ಕೆ ೩೩ ಸಾವಿರ ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ. ಆ ಪೈಕಿ ಬಹುತೇಕ ಜನರಿಗೆ ಪರೀಕ್ಷೆ ನಡೆಸಲಾಗಿದ್ದು ಅದರಲ್ಲಿ ೨೦ ಮಂದಿಗೆ ಹೊಸ ಮಾದರಿ ಸೋಂಕು ಪತ್ತೆಯಾಗಿದೆ.