ರಾಜ್ಯದ ಏಳು ಕ್ಷೇತ್ರದಲ್ಲಿ ಸಿಪಿಐ ಸ್ಪರ್ಧೆ, ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಸಿಪಿಐಎಂ, ಸರ್ವೋದಯ ಪಕ್ಷಕೆ ಬೆಂಬಲ

ದಾವಣಗೆರೆ.ಏ.೨೩:  ಕರ್ನಾಟಕ ರಾಜ್ಯದ ವಿಧಾನಸಭೆಯಲ್ಲಿ ಏಳು ಕ್ಷೇತ್ರಗಳಲ್ಲಿ ಸಿಪಿಐ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಸ್ಪರ್ಧೆಗೆ ಇಳಿಸುತ್ತಿದ್ದು ಮೇಲುಕೋಟೆ ಕ್ಷೇತ್ರದಲ್ಲಿ ಕರ್ನಾಟಕ ಪಕ್ಷದ ಸರ್ವೋದಯ ಪಕ್ಷದ ಅಭ್ಯರ್ಥಿ ಹಾಗೂ ಬಾಗೇಪಲ್ಲಿಯಿಂದ ಸ್ಪರ್ಧಿಸಿರುವ ಸಿಪಿಐಎಂ ಪಕ್ಷದ ಅಭ್ಯರ್ಥಿಗೆ ಸಿಪಿಐ ಪಕ್ಷ ಬೆಂಬಲ ಸೂಚಿಸಿದ್ದು ಉಳಿದ 213 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸುತ್ತದೆ ಎಂದು ಸಿಪಿಐ  ರಾಜ್ಯ ಮಂಡಳಿ ಸಹ ಕಾರ್ಯದರ್ಶಿ ಡಿ.ಎ.ವಿಜಯ ಭಾಸ್ಕರ್ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಸಿದ ಭ್ರಷ್ಟಾಚಾರಕ್ಕೆ ಮಿತಿಯೇ ಇಲ್ಲ. ಸ್ವತಃ ಮುಖ್ಯಮಂತ್ರಿಗಳೇ ಕೋಮುವಾದಿ ಶಕ್ತಿಗಳಿಗೆ ಕುಮ್ಮಕ್ಕು ಕೊಟ್ಟ ಹಲವು ನಿದರ್ಶನಗಳಿವೆ. ತಮ್ಮ ಪಕ್ಷದ ಮತೀಯವಾದಿ ವಿಷಯಗಳನ್ನು ಪಠ್ಯಸ್ತಕಗಳಲ್ಲಿ ಅಳವಡಿಸಿ ಮಕ್ಕಳ ಮನಸ್ಸನ್ನು ಕಲುಷಿತ ಮಾಡಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದಿರುವಾಗಲೇ ಸರ್ಕಾರ ರಾಜ್ಯದಲ್ಲಿ ಅನುಷ್ಠಾನ ಮಾಡಿ ವಿದ್ಯಾರ್ಥಿಗಳ ನಡುವ ಗೊಂದಲ ಉಂಟು ಮಾಡಿತು. ಇಡೀ ಶೈಕ್ಷಣಿಕ ವರ್ಷವೇ ಗೊಂದಲದ ಗೂಡಾಯಿತು. ಮತೀಯ ದ್ವೇಷಕ್ಕೆ ಬಲಿಯಾದ ಅಮಾಯಕ ವ್ಯಕ್ತಿಗಳಿಗೆ ಸರ್ಕಾರ ಪರಿಹಾರ ನೀಡುವಲ್ಲಿ ಮತೀಯ ಆಧಾರದಲ್ಲಿ ತಾರತಮ್ಯ ಮಾಡಿದೆ ಎಂದು ತಿಳಿಸಿದರು.ಸಂವಿಧಾನಕ್ಕೆ ಎಸಗಿದ ಅಪಚಾರ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣದ ಮಸೂದೆಯನ್ನು ಜಾರಿ ಮಾಡುವ ಮೂಲಕ ರಾಜ್ಯದ ರೈತ ಸಮುದಾಯಕ್ಕೆ ದ್ರೋಹ ಬಗೆದಿದೆ. ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಕಾರ್ಮಿಕರ ದಿನಕ್ಕೆ 8 ಗಂಟೆಗಳ ಕಾಲ ದುಡಿಯುವ ಹಕ್ಕನ್ನು ಕಸಿದುಕೊಂಡಿದೆ. ಅಸುರಕ್ಷತೆಯ ವಾತಾವರಣದಲ್ಲೂ ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುವ ನಿಯಮವನ್ನು ಜಾರಿಗೊಳಿಸಿದ, ಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ ಆ‌ರ್‌ಎಸ್‌ಎಸ್ ನ ಸುಪ್ತ ಕಾರ್ಯ ಸೂಚಿಯನ್ನು ಅನುಷ್ಠಾನ ಮಾಡಿದೆ ಎಂದು ತಿಳಿಸಿದರು.ಮಹಿಳೆಯರ ಮತ್ತು ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದರೂ ಬಿಜೆಪಿ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಕರ್ನಾಟಕದ ಸಾರ್ವಜನಿಕ ಉದ್ದಿಮೆಗಳು ಮತ್ತು ಸಹಕಾರಿ ಕ್ಷೇತ್ರದ ನಂದಿನಿಯಂತಹ ಉದ್ಯಮಗಳನ್ನು ಖಾಸಗೀಕರಣ ಮಾಡಲು ಬಿಜೆಪಿ ಸರ್ಕಾರ ಹೊಂಚು ಹಾಕುತ್ತಿದೆ. ಸ್ಥಳೀಯ ಭಾಷೆಗಳ ಮೇಲೆ ಹಿಂದಿ ಭಾಷೆಯನ್ನು ಹೇರುವ ಆರ್‌ಎಸ್‌ಎಸ್‌ ಕಾರ್ಯಸೂಚಿಯನ್ನು ಕರ್ನಾಟಕದಲ್ಲಿ ಕನ್ನಡದ ಮೇಲೆ ಬಿಜೆಪಿ ಸರ್ಕಾರ ಮಾಡುತ್ತಿರುವುದು ಕನ್ನಡಿಗರ ಪ್ರತಿರೋಧಕ್ಕೂ ಕಾರಣವಾಗಿದೆ. ಅಲ್ಲದೆ ನಾಡಿನ ಲಕ್ಷಾಂತರ ಎಕರೆ ಗೋಮಾಳವನ್ನು ಆ‌ರ್ ಎಸ್‌ಎಸ್ ಪರಿವಾರದ ಸಂಘ ಸಂಸಗಳಿಗೆ ಪರಭಾರೆ ಮಾಡಲು ಕ್ರಮ ಕೈಗೊಂಡಿದೆ ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಟಿಯಲ್ಲಿ ಸಿಪಿಐನ ಜಿಲ್ಲಾ ಘಟಕದ ಆವರಗೆರೆ ಹೆಚ್.ಜಿ.ಉಮೇಶ್, ಅವರಗೆರೆ ಚಂದ್ರು, ಅವರಗೆರೆ ವಾಸು, ಆನಂದ ರಾಜ್, ಟಿ.ಎಸ್.ನಾಗರಾಜ್, ಐರಣಿ ಚಂದ್ರು ಇತರರು ಇದ್ದರು.