ರಾಜ್ಯದ ಎಲ್ಲ‌ ಗ್ರಾ.ಪಂಗಳಿಗೆ ಸೌರಶಕ್ತಿ ಅಳವಡಿಕೆಗೆ 300‌ ಕೋಟಿ ವೆಚ್ಚ: ಈಶ್ವರಪ್ಪ

ಉಡುಪಿ, ಜ 12- ರಾಜ್ಯದ ಎಲ್ಲ ಗ್ರಾಮ‌ ಪಂಚಾಯ್ತಿಗಳಿಗೆ ಸೌರಶಕ್ತಿ ಅಳವಡಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಈ ಯೋಜನೆಗೆ 300 ಕೋಟಿ ರೂಪಾಯಿ ವೆಚ್ಚ ಮಾಡಲು ತೀರ್ಮಾನಿಸಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಉಡುಪಿಯಲ್ಲಿಂದು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.
ಸೌರಶಕ್ತಿ ಅಳವಡಿಕೆಗೆ‌ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದ್ದು ಜಿಲ್ಲಾವಾರು 9 ಕಂಪನಿಗಳನ್ನು ಆಯ್ಕೆಮಾಡಲಾಗಿದೆ ಎಂದು ಹೇಳಿದರು.
ಪಂಚಾಯಿತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಪೂರ್ಣಗೊಂಡ ನಂತರ ಸೌರ ಶಕ್ತಿ ಉಪಕರಣಗಳ ಅಳವಡಿಕೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ಸೋಲಾರ್ ಅಳವಡಿಕೆಯಾದರೆ ವಿದ್ಯುತ್ ಬಿಲ್ ಬಾಕಿ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಪಂಚಾಯಿತಿ ಸದಸ್ಯರ ಗೌರವಧನವನ್ನು 1 ಸಾವಿರದಿಂದ 2 ಸಾವಿರಕ್ಕೆ ಹೆಚ್ಚಿಸಲು ಮುಂದಿನ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳುವುದಾಗಿ ಈಶ್ವರಪ್ಪ ಆಶ್ವಾಸನೆ ನೀಡಿದರು.