ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಗೂ ಯೋಗ ಶಿಬಿರ


ಮಂಗಳೂರು, ಮಾ.೩೦- ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಗೂ ದೈಹಿಕ ಕ್ಷಮತೆಗಾಗಿ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ದೈಹಿಕ ಸಾಮರ್ಥ್ಯ ಬಲವರ್ಧನೆ ಹಾಗೂ ದೈಹಿಕ ಕ್ಷಮತೆಯ ಸದೃಢತೆಯ ಕಾರ್ಯಾಗಾರ ೨೦೨೧ರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪೊಲೀಸ್ ವೃತ್ತಿಯಲ್ಲಿ ಕಾರ್ಯ ಕ್ಷಮತೆಯನ್ನು ಸಾಧಿಸಬೇಕಾದರೆ ದೈಹಿಕ ಮತ್ತು ಮಾನಸಿಕ ಕ್ಷಮತೆ ಅಗತ್ಯ. ಈ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ನೇತೃತ್ವದಲ್ಲಿ ಪೊಲೀಸರಿಗೆ ಹಮ್ಮಿಕೊಂಡ ಯೋಗ ಶಿಬಿರ ಒಂದು ಮಾದರಿ ಈ ಯಶಸ್ವಿ ಕಾರ್ಯಕ್ರಮ. ಈ ಶಿಬಿರದಲ್ಲಿ ಭಾಗಹಿಸಿದ ಪೊಲೀಸರು ತಮ್ಮ ದೇಹದ ಹೆಚ್ಚಿನ ಭಾರವನ್ನು ಕಡಿಮೆ ಮಾಡಿಕೊಂಡಿರುವುದನ್ನು ಗಮನಿಸಿದಾಗ ಈ ಶಿಬಿರವು ಕರ್ತವ್ಯದಲ್ಲಿ ತೊಡಗಿರುವ ಪೊಲೀಸರಿಗೆ ಅನುಕೂಲವಾಗಿದೆ ಎನ್ನುವುದನ್ನು ತೋರಿಸಿಕೊಡುತ್ತದೆ. ಅದಕ್ಕಾಗಿ ಶಿಬಿರದ ಆಯೋಜಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಶಿಬಿರದ ಪ್ರೇರಣೆಯೊಂದಿಗೆ ರಾಜ್ಯದ ಎಲ್ಲಾ ಪೊಲೀಸರಿಗೂ ಯೋಗ ಶಿಬಿರವನ್ನು ಹಮ್ಮಿಕೊಳ್ಳಲು ಕಾರ್ಯ ಯೋಜನೆ ಹಮ್ಮಿಕೊಳ್ಳುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ‘ನಾವು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಮತ್ತು ಮಹಿಳೆಯರಿಗಾಗಿ ಒಂದು ತಿಂಗಳ ಕಾಲ ಪೊಲೀಸ್ ಫಿಟ್ನೆಸ್ ಶಿಬಿರವನ್ನು ನಡೆಸಿದ್ದೆವು. ಜೀವನ ಶೈಲಿಯಿಂದಾಗಿ ಕೆಲವು ಪೊಲೀಸರು ಬೊಜ್ಜು ಹೊಂದಿದ್ದರು. ಆದ್ದರಿಂದ ನಾವು ಪೋಲಿಸ್ ಫಿಟ್ನೆಸ್ ಶಿಬಿರವನ್ನು ೯೦ ಕ್ಕಿಂತ ಹೆಚ್ಚು ತೂಕ ಹೊಂದಿದ್ದ ಪುರುಷ ಸಿಬ್ಬಂದಿಗಳು ಮತ್ತು ೭೦ ಕ್ಕಿಂತ ಹೆಚ್ಚು ತೂಕ ಹೊಂದಿದ್ದ ಮಹಿಳಾ ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದೆವು. ಕಳೆದ ಒಂದು ತಿಂಗಳಲ್ಲಿ ತೂಕ ಇಳಿಕೆ ಸೇರಿದಂತೆ ಫಿಟ್‌ನೆಸ್‌ನಲ್ಲಿ ವಿವಿಧ ಸುಧಾರಣೆಗಳು ಕಂಡುಬಂದಿವೆ ಎಂದರು. ಇನ್ನು ಕಾನೂನು ಸುವ್ಯವಸ್ಥೆ ಡಿಸಿಪಿ ಹರಿರಾಮ್ ಶಂಕರ್ ಮಾತನಾಡಿ, ’ಮಾರ್ಚ್ ೧ ರಿಂದ ಮಾರ್ಚ್ ೨೯ ರವರೆಗೆ ಒಂದು ತಿಂಗಳ ಪೊಲೀಸ್ ಫಿಟ್ನೆಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಒಂದು ತಿಂಗಳ ಪೊಲೀಸ್ ಫಿಟ್ನೆಸ್ ಅವಧಿಯಲ್ಲಿ ೨೬ ಮಹಿಳಾ ಸಿಬ್ಬಂದಿಗಳು ಸೇರಿದಂತೆ ೭೬ ಮಂದಿ ಪೊಲೀಸರು ಭಾಗವಹಿಸಿದ್ದರು. ಫಿಟ್ನೆಸ್ ಕಾರ್ಯಕ್ರಮವು ಯೋಗ, ಡ್ರಿಲ್ ಪ್ರಾಕ್ಟೀಸ್, ತರಬೇತಿ ಅವಧಿಗಳು, ಹಲವಾರು ಕಿಲೋಮೀಟರ್ ನಡಿಗೆಯೊಂದಿಗೆ ಪ್ರಾರಂಭವಾಯಿತು. ಪೊಲೀಸರು ಮತ್ತು ಮಹಿಳೆಯರು ೧.೪ ಕೆಜಿಯಿಂದ ೧೦.೫ ಕೆಜಿ ವರೆಗೆ ತೂಕ ಇಳಿಕೆಯನ್ನು ಕಂಡಿದ್ದಾರೆ ಎಂದರು. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ, ಫಾದರ್ ಮುಲ್ಲರ್ ಚ್ಯಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂ. ರಿಚರ್ಡ್ ಕುವೆಲ್ಲೊ, ಡಿಜಿಪಿ ಹರಿರಾಮ್ ಶಂಕರ್, ಪತಂಜಲಿ ಯೋಗ ಗುರುಗಳಾದ ಭವರ್ ಲಾಲ್, ಡಾ.ಜ್ಞಾನೇಶ್ವರ ಮೊದಲಾದವರು ಉಪಸ್ಥಿತರಿದ್ದರು.