ರಾಜ್ಯದ ಅಭಿವೃದ್ಧಿ ಹದಗೆಟ್ಟು ಹೋಗಿದೆ: ಪಾಟೀಲ್

(ಸಂಜೆವಾಣಿ ವಾರ್ತೆ)
ಕುಂದಗೋಳ,ಸೆ7: ಜನರಿಗೆ ಕೊಟ್ಟ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಅಭಿವೃದ್ಧಿ ವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ಶಾಸಕ ಎಂ.ಆರ್.ಪಾಟೀಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಮಗ್ನರಾಗಿದ್ದಾರೆ ಹೊರತು ಇತರೆ ಅಭಿವೃದ್ಧಿ ಕಡೆ ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಯೋಜನೆಗಳಿಗೆ ಕೇವಲ ಒಂದು ವರ್ಷದ ವರೆಗೆ ಮಾತ್ರ ಆಯುಷ್ಯ ಇರಲಿದ್ದು, ಲೋಕಸಭಾ ಚುನಾವಣೆಯ ನಂತರ ಇವರ ರಾಜಕೀಯ ನಾಟಕ ಹೊರಬೀಳಲಿದೆ ಎಂದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಘವೇಂದ್ರಗೌಡ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಪ್ರಸಕ್ತ ವರ್ಷ ಮುಂಗಾರು ಕೈಕೊಟ್ಟಿದ್ದರಿಂದ ರೈತರು ಆರ್ಥಿಕವಾಗ ಸಂಕಷ್ಟದಲ್ಲಿರುವಾಗ ಅವರ ಕಡೆ ಗಮನ ಹರಿಸದೆ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರೈತ ಮೋರ್ಚಾ ವತಿಯಿಂದ ಇದೇ ಸೆಪ್ಟೆಂಬರ್ ದಿನಾಂಕ 12 ರಂದು ಪಟ್ಟಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರಿಂದ ಮೆರವಣಿಗೆ ನಡೆಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವಿಗೌಡ ಪಾಟೀಲ, ರೈತ ಮೋರ್ಚಾ ತಾಲೂಕ ಅಧ್ಯಕ್ಷ ಚನ್ನಪ್ಪ ಹರಕುಣಿ, ಮಹಾಂತೇಶ ಶ್ಯಾಗೋಟಿ ಉಪಸ್ಥಿತರಿದ್ದರು.