ರಾಜ್ಯದ ಅಭಿವೃದ್ಧಿಗೆ ನಿಜಲಿಂಗಪ್ಪ ಕೊಡುಗೆ ಅಪಾರ

ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪರವರ ಜನ್ಮದಿನಾಚರಣೆ ಪ್ರಯುಕ್ತ ವಿಧಾನಸೌಧದ ಮುಂಭಾಗ ನಿಜಲಿಂಗಪ್ಪ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪುಷ್ಪ ನಮನ ಸಲ್ಲಿಸಿದರು. ಹಿರಿಯ ಮುಖಂಡರುಗಳು ಇದ್ದಾರೆ.

ಬೆಂಗಳೂರು, ಡಿ. ೧೦ : ಐವತ್ತು ವರ್ಷಗಳ ಕಾಲ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತೊಡಗಿದ್ದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಕರ್ನಾಟಕದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ದಿವಂಗತ ಎಸ್.ನಿಜಲಿಂಗಪ್ಪನವರ ಜನ್ಮ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಎಸ್. ನಿಜಲಿಂಗಪ್ಪನವರು ರಾಜ್ಯ ಕರ್ನಾಟಕವೆಂದು ನಾಮಕರಣವಾದ ನಂತರದ ಮೊದಲ ಮುಖ್ಯಮಂತ್ರಿ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು ಮಹಾತ್ಮಾ ಗಾಂಧಿ ಹಾಗೂ ವಿನೋಬಾ ಭಾವೆಯವರ ಆದರ್ಶಗಳಿಂದ ಪ್ರೇರಿತರಾಗಿದ್ದರು. ನಿಜಲಿಂಗಪ್ಪನವರು ಕರ್ನಾಟಕದ ಏಕೀಕರಣದಲ್ಲಿ ಭಾಗಿಯಾಗಿದ್ದರು. ಅವರ ಅವಧಿಯಲ್ಲಿ ರೈತರ ಒಳಿತಿಗಾಗಿ ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದರು. ಅವಿಭಾಜಿತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.

ಬಿಜೆಪಿಯವರ ಮೇಲೂ ಐಟಿ ದಾಳಿ ನಡೆಯಲಿ
ಕಾಂಗ್ರೆಸ್‌ನವರನ್ನೇ ಗುರಿಯಾಗಿಸಿ ಐಟಿ ದಾಳಿ ನಡೆಸಲಾಗುತ್ತಿದೆ. ಬಿಜೆಪಿಯವರ ಮೇಲೂ ಐಟಿ ದಾಳಿ ನಡೆದರೆ ಅವರ ಬಳಿಯೂ ದೊಡ್ಡ ಮಟ್ಟದಲ್ಲಿ ಲೆಕ್ಕಕ್ಕಿಲ್ಲದ ಹಣ ದೊರೆಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿಂದು ರಾಷ್ಟ್ರನಾಯಕ ದಿ. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ದಾಳಿಗಳನ್ನು ಕಾಂಗ್ರೆಸ್ ನಾಯಕರನ್ನೆ ಗುರಿಯಾಗಿಸಿ ಮಾಡಲಾಗುತ್ತಿದೆ. ಯಾರ ಮನೆಯಲ್ಲಿ ಹಣ ಸಿಕ್ಕರೂ ಅದು ತಪ್ಪೆ. ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲಿ, ನಮ್ಮದೇನು ತಕರಾರಿಲ್ಲ ಎಂದರು.
ಕಾಂಗ್ರೆಸ್ ಪಕ್ಷದವರನ್ನೇ ಗುರಿಯಾಗಿಸಿ ಐಟಿ ದಾಳಿ ಮಾಡಲಾಗುತ್ತಿದೆ. ಬಿಜೆಪಿ ಪಕ್ಷದವರ ಮೇಲೂ ಐಟಿ ದಾಳಿಗಳಾದರೆ ಅವರ ಮನೆಯಲ್ಲೂ ಅಪಾರ ಪ್ರಮಾಣದ ಹಣ ಸಿಗುತ್ತದೆ ಎಂದು ಜಾರ್ಖಂಡ್‌ನ ಕಾಂಗ್ರೆಸ್ ನಾಯಕರ ಮನೆಯಲ್ಲಿ ಐಟಿ ದಾಳಿ ಸಂದರ್ಭದಲ್ಲಿ ೩೦೦ ಕೋಟಿಗೂ ಹೆಚ್ಚು ಹಣ ಸಿಕ್ಕಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.
ಯಾರೇ ಆಗಲೀ ತೆರಿಗೆ ವಂಚನೆ ಹಣ ಇಟ್ಟುಕೊಂಡರೆ ಅದು ತಪ್ಪು. ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಲೇ ಬೇಕು. ಬಿಜೆಪಿ ನಾಯಕರ ಮನೆ ಮೇಲೂ ದಾಳಿ ನಡೆಸಲಿ. ಅವರ ಬಳಿ ಇರುವ ಹಣವನ್ನು ಪತ್ತೆಹಚ್ಚಲಿ ಎಂದು ಮುಖ್ಯಮಂತ್ರಿಗಳು ಹೇಳಿದರು.