ರಾಜ್ಯದ‌ ಹಲವೆಡೆ ವರುಣನ ಆರ್ಭಟ: ಸಿಡಿಲು ಬಡಿದು ಏಳು ಮಂದಿ ಸಾವು

ಬೆಂಗಳೂರು, ಮೇ 4- ಯಾದಗಿರಿ, ದಾವಣಗೆರೆ ವಿಜಯನಗರ‌ ಜಿಲ್ಲೆಗಳಲ್ಲಿ ಗುಡುಗು ಸಹಿತ‌ ಮಳೆ ಸುರಿದಿದ್ದು ಸಿಡುಲು ಬಡಿದು ಏಳು ಮಂದಿ ಮೃತಪಟ್ಟಿದ್ದಾರೆ.
ಯಾದಗಿರಿಯಲ್ಲಿ ಜಮೀನಿಗೆ ಕೂಲಿ ಕೆಲಸಕ್ಕೆಂದು ತೆರಳಿದ ಸಿದ್ದಮ್ಮ (40) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಸಿಡಿಲು ಹೊಡೆತಕ್ಕೆ ಸಿಲುಕಿ ರಾಜಶೇಖರ (33), ಚಿನ್ನಾಪುರಿ (40), ವೀರಣ್ಣ (50), ಪತ್ರೆಪ್ಪ (43) ಸಾವನ್ನಪ್ಪಿದ್ದಾರೆ. ದಾವಣಗೆರೆಯಲ್ಲಿ ಸಂಜೆಯಿಂದ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ರವಿಕುಮಾರ್(32), ರಮೇಶ್ (30) ಸಿಡಿಲು ಬಡಿದು ಇಬ್ಬರು ಸಾವಿಗೀಡಾಗಿದ್ದಾರೆ.
ಇಂದು ಮೋಡ ಕವಿದ ವಾತಾವರಣ ಇತ್ತು. ಸಂಜೆ ಹೊತ್ತಿಗೆ ಗುಡುಗು ಮಿಂಚು ಸಹಿತ ಮಳೆಯಾಗಿದೆ. ನಾಳೆಯೂ ಇದೇ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಮಧ್ಯೆ ರಾಜಧಾನಿ ಬೆಂಗೂರಿನ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಮಧ್ಯಾನ್ಹದ ವೇಳೆಗೆ ನೆತ್ತಿ ಸುಡುವ ಬಿಸಿಲಿತ್ತು. ಸಂಜೆಯ ವೇಳೆಗೆ ಗುಡುಗು ಸಹಿತ ಮಳೆ ಸುರಿದಿದೆ.
ಮುಂದಿನ 5 ದಿನಗಳಕಾಲ ಭಾರತದ ದಕ್ಷಿಣ ಪರ್ಯಾಯ ದ್ವೀಪಗಳಲ್ಲಿ ಹಾಗೂ ಮೇ 4 ರಿಂದ 6ವರೆಗೆ ಕೇರಳ ಮತ್ತು ಮಾಹೆ ಪ್ರದೇಶದಲ್ಲಿ ಜೋರಾಗಿ ಮಳೆಯಾಗುವ ಸಾಧ್ಯತೆ ಇದೆ. ಮೇ5 ಮತ್ತು6 ಕರಾವಳಿ ಮತ್ತು ದಕ್ಷಿಣ ಒಳ ಕರ್ನಾಟಕ ಪ್ರದೇಶದಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತ ಹವಾಮಾನ ಇಲಾಖೆ ಟ್ವೀಟ್ ಮಾಡಿದೆ.