ರಾಜ್ಯದೆಲ್ಲೆಡೆ ಸಾವಿರಾರು ಖಾಸಗಿ ಬಸ್ ಗಳ ಸಂಚಾರ

ಬೆಂಗಳೂರು, ಏ.೮- ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದ ಎರಡನೇ ದಿನವೂ ಬಸ್ ಸಂಚಾರ ಸ್ಥಗಿತ ಸ್ಥಗಿತಗೊಂಡಿರುವುದರಿಂದ ರಾಜ್ಯದ ವಿವಿಧೆಡೆ ಖಾಸಗಿ ಬಸ್‌ಗಳ ಸಂಚಾರ ಇಂದು ಕೂಡ ಹೆಚ್ಚಾಗಿದೆ. ನಗರದ ಮೆಜೆಸ್ಟಿಕ್ ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ಇತರ ನಿಲ್ದಾಣಗಳಿಂದ ಖಾಸಗಿ ಬಸ್‌ಗಳು ಸಂಚಾರ ನಡೆಸುತ್ತಿದ್ದು ಪ್ರಯಾಣಿಕರು ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು.
ನಗರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಖಾಸಗಿ ಬಸ್‌ಗಳನ್ನು ಸಂಚಾರಕ್ಕೆ ಬಿಡಲಾಗಿದ್ದರೆ ರಾಜ್ಯದ ಬೇರೆ ಜಿಲ್ಲೆಗಳಲ್ಲೂ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್‌ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿತ್ತು. ಮುಷ್ಕರ ಇದೆ ಎಂಬ ಕಾರಣಕ್ಕೆ ಪ್ರಯಾಣ ದರ ಹೆಚ್ಚಳ ಮಾಡಬಾರದು ಎಂಬ ಎಚ್ಚರಿಕೆಯನ್ನೂ ನೀಡಿದೆಯಾದರೂ ತಮಗಿಷ್ಟ ಬಂದ ದರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯ ತೊಡಗಿದ್ದಾರೆ. ಖಾಸಗಿ ಬಸ್‌ಗಳು ಸರ್ಕಾರಿ ಬಸ್ ನಿಲ್ದಾಣಗಳಿಗೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅವಕಾಶವನ್ನೂ ನೀಡಲಾಗಿತ್ತು. ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಿಂದ ಬಿಗಿ ಭದ್ರತೆಯಲ್ಲಿ ಖಾಸಗಿ ಬಸ್’ಗಳ ಸಂಚಾರ ಆರಂಭವಾಗಿದೆ.
ಜಿಲ್ಲಾಡಳಿತ, ಪೊಲೀಸ್ ಹಾಗೂ ಸಾರಿಗೆ ಅಧಿಕಾರಿಗಳ ನೇತೃತ್ವದಲ್ಲಿ ಬೆಳಗಾವಿ, ವಿಜಯಪುರ, ಗದಗ ಹಾಗೂ ವಿವಿಧ ಭಾಗಗಳಿಗೆ ಖಾಸಗಿ ಬಸ್’ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆಯೂ ಖಾಸಗಿ ಬಸ್ ಸಂಚಾರ ನಡೆಸಿವೆ. ಮುಂಜಾಗ್ರತ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಬೆಳಗಾವಿಯಲ್ಲೂ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿಯದಿದ್ದರದ ಖಾಸಗಿ ಬಸ್ ಕ್ಯಾಬ್ ಇತರ ಖಾಸಗಿ ವಾಹನ ಸಂಚಾರ ಹೆಚ್ಚಾಗಿದೆ.ಖಾಸಗಿ ಬಸ್‌ಗಳು ಹುಬ್ಬಳ್ಳಿ- ಬೆಳಗಾವಿ ಮಾರ್ಗದಲ್ಲಿ ಸಂಚರಿಸುತ್ತಿವೆ. ಅವುಗಳ ಸಂಚಾರಕ್ಕೆ ಯಾವುದೇ ತೊಂದರೆ ಆಗಿಲ್ಲ. ಕಲಬುರ್ಗಿಯಆಯ್ದ ಮಾರ್ಗಗಳಲ್ಲಿ ಖಾಸಗಿ ಬಸ್ ಸಂಚಾರ ಆರಂಭಗೊಂಡಿದೆ. ಮುಷ್ಕರದ ಮಾಹಿತಿ ಇದ್ದುದರಿಂದ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇದೆ.ಕೆಲ ಖಾಸಗಿ ಬಸ್ ಗಳು ಹುಮನಾಬಾದ್-ಬೀದರ್, ಬಳ್ಳಾರಿ ಮಾರ್ಗದಲ್ಲಿ ಸಂಚಾರ ನಡೆಸಿದವು. ಬಾಗಲಕೋಟೆಯಲ್ಲಿ ಬಸ್ ನಿಲ್ದಾಣಗಳಿಗೆ ಬೇರೆ ಊರುಗಳಿಂದ ಬಂದ ಪ್ರಯಾಣಿಕರು ಊರಿಗೆ ತೆರಳಲು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಿದೆ. ಉಡುಪಿಯಲ್ಲಿಖಾಸಗಿ ಬಸ್‌ಗಳ ಸಂಚಾರ ಎಂದಿನಂತಿದೆ. ಜಿಲ್ಲೆಯ ಎಲ್ಲ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ ಇರುವುದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಓಡಾಡುವ ಹಾಗೂ ಉಡುಪಿ ಮಂಗಳೂರು ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಸಮಸ್ಯೆಯಾಗಲಿಲ್ಲ.
ಹೊರ ಜಿಲ್ಲೆಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಬಂದಿದ್ದ ಕೆಲವು ಪ್ರಯಾಣಿಕರಿಗೆ ಸಮಸ್ಯೆಯಾಯಿತು.
ಚಿತ್ರದುರ್ಗದಲ್ಲಿ ಖಾಸಗಿ ಬಸ್ ಗಳು ಪೊಲೀಸ್ ಭದ್ರತೆಯಲ್ಲಿ ಸಂಚರಿಸಿದವು.ಪೂನಾದಿಂದ ದಾವಣಗೆರೆ ಮಾರ್ಗವಾಗಿ ಬಂದಿದ್ದ ವೋಲ್ವೊ ಬಸ್ ಬೆಂಗಳೂರಿಗೆ ತೆರಳಿತು. ಪ್ರಯಾಣಿಕರು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರಿಂದ ಕೊಟ್ಟೂರು ಮಾರ್ಗವಾಗಿ ಹೂವಿನಹಡಗಲಿ ಹಾಗೂ ಮತ್ತೊಂದು ಬಸ್ ಭರಮಸಾಗರ ಮಾರ್ಗವಾಗಿ ದಾವಣಗೆರೆಗೆ ಸಂಚರಿಸಿತು. ಬಹುತೇಕ ನೌಕರರು ಕರ್ತವ್ಯಕ್ಕೆ ಗೈರು ಹಾಜರು ಆಗಿದ್ದಾರೆ. ನಿತ್ಯ ಜನಜಂಗುಳಿಯಿಂದ ಕೂಡಿರುತ್ತಿದ್ದ ಬಸ್ ನಿಲ್ದಾಣ ಜನರಿಲ್ಲದೇ ಬಿಕೊ ಎನ್ನುತ್ತಿದೆ. ಖಾಸಗಿ ಬಸ್ ಸಂಚಾರ ಎಂದಿನಂತಿದೆ. ಕೆ ಎಸ್ ಆರ್ ಟಿ ಸಿ ಬಸ್ ನಡುವೆ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಖಾಸಗಿ ಬಸ್ ಗಳು ಸೇವೆ ಒದಗಿಸುತ್ತಿವೆ. ಖಾಸಗಿ ಬಸ್ಸುಗಳಿಗೆ ಪ್ರಯಾಣಿಕರು ಮುಗಿಬಿದ್ದಿದ್ದಾರೆ
ಕೆಲಸಗಳಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ನಿಲುವಿನ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ.ಕಾರವಾರದಲ್ಲಿ ಟೆಂಪೋಗಳ ಸಂಚಾರ ಎಂದಿನಂತೆ ಇದೆ.
ಸಾರಿಗೆ ನೌಕರರ ಮುಷ್ಕರದ ನಡುವೆಯೂ ರಾಜ್ಯಾದ್ಯಂತ ಒಟ್ಟು ೨೭೬ ಸಾರಿಗೆ ಬಸ್‌ಗಳು ಸಂಚಾರ ನಡೆಸಿವೆ.
ಸಾರಿಗೆ ಸಂಸ್ಥೆ ನೀಡಿರುವ ಮಾಹಿತಿಯಂತೆ ಮಧ್ಯಾಹ್ನ ೧ ಗಂಟೆಯವರೆಗೆ ಬಿಎಂಟಿಸಿ ಸೇರಿದಂತೆ ರಾಜ್ಯದ ವಿವಿಧೆಡೆ ಒಟ್ಟಾರೆ ೨೭೬ ಬಸ್‌ಗಳು ಓಡಾಡುತ್ತಿದೆ.
ಕೆಎಸ್‌ಆರ್ ಟಿಸಿಯ ೧೧೪ ಬಸ್‌ಗಳು ಸಂಚರಿಸಿವೆ. ಬಿಎಂಟಿಸಿ ೪೭, ಎನ್‌ಇಕೆಆರ್ ಟಿಸಿ ೧೦೦, ಎನ್‌ಡಬ್ಲ್ಯೂಕೆಆರ್‌ಟಿಸಿ ನಿಗಮದ ವ್ಯಾಪ್ತಿಯಲ್ಲಿ ೧೫ ಬಸ್‌ಗಳು ಪೊಲೀಸ್ ಬಿಗಿ ಭದ್ರತೆಯಲ್ಲಿ ಸಂಚರಿಸಿವೆ