ರಾಜ್ಯದಲ್ಲೂ 3 ದಿನ ಮಳೆ

ಬೆಂಗಳೂರು, ಡಿ ೪- ಇಂದು ಜವಾದ್ ಚಂಡಮಾರುತವು ಒಡಿಶಾ ಹಾಗೂ ಆಂಧ್ರ ಪ್ರದೇಶದ ಕರಾವಳಿಗೆ ಅಪ್ಪಳಿಸಲಿದ್ದು, ಹೀಗಾಗಿ ತಮಿಳುನಾಡು ಹಾಗೂ ಒಡಿಶಾ ಎರಡೂ ರಾಜ್ಯಗಳಲ್ಲಿ ಕೆಟ್ಟೆಚ್ಚರ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆಯೂ ಮುನ್ಸೂಚನೆ ನೀಡಿದೆ. ಇನ್ನು ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ೩ ದಿನ ಮಳೆಯಾಗಲಿದೆ.
ಒಡಿಶಾ ಹಾಗೂ ಆಂಧ್ರದ ಕರಾವಳಿಗೆ ಜವಾದ್ ಚಂಡಮಾರುತ ಅಪ್ಪಳಿಸಲಿದೆ. ಸೈಕ್ಲೋನ್ ಕಾರಣದಿಂದಾಗಿ ಭಾರೀ ಮಳೆಯಾಗಲಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಅಂಡಮಾನ್-ನಿಕೋಬಾರ್ ದ್ವೀಪ ಸಮೂಹದಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನೂ ಜವಾದ್ ಚಂಡಮಾರುತದ ಪರಿಣಾಮದಿಂದಾಗಿ ಕರ್ನಾಟಕದಲ್ಲೂ ಮುಂದಿನ ೭೨ ಗಂಟೆ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮುನ್ಸೂಚನೆ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೂ ಐಎಂಡಿ ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಮಳೆ ಮುಂದುವರೆಯುತ್ತಿದ್ದು, ಇಂದಿನಿಂದ ಮಳೆಯ ಜೊತೆಗೆ ನೆರೆಯ ರಾಜ್ಯವಾದ ಆಂಧ್ರ ಪ್ರದೇಶದಲ್ಲಿ ಚಂಡಮಾರುತವೂ ಅಪ್ಪಳಿಸಲಿದೆ. ಆಂಧ್ರಪ್ರದೇಶದ ಜೊತೆಗೆ ಒಡಿಶಾ, ಪಶ್ಚಿಮ ಬಂಗಾಳದಲ್ಲೂ ಇಂದು ಜವಾದ್ ಚಂಡಮಾರುತ ಆರ್ಭಟಿಸಲಿದೆ. ಚಂಡಮಾರುತದ ಪರಿಣಾಮದಿಂದ ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಮಳೆ ಹೆಚ್ಚಾಗಲಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನದಲ್ಲಿ ಮಳೆ ಸುರಿಯುತ್ತಿದೆ. ರಾಜ್ಯಾದ್ಯಂತ ಇಂದಿನಿಂದ ಡಿ. ೬ರವರೆಗೆ ವರುಣನ ಆರ್ಭಟವಿರಲಿದೆ.
ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದ ಅಜ್ಜಂಪುರ ತಾಲೂಕಿನ ಶಿವನಿ ಕೆರೆ ತುಂಬಿ ಹರಿಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ೮೪೫ ಕೋಟಿ ರೂ. ಹಾನಿಯಾಗಿದೆ. ಇಂದು ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಧಾರವಾಡ, ಬಾಗಲಕೋಟೆ, ಗದಗ, ಹಾವೇರಿ, ಕಲಬುರ್ಗಿ, ವಿಜಯಪುರ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಯಲ್ಲಿ ಮಳೆಯಾಗಲಿದೆ. ಇಂದಿನಿಂದ ೩ ದಿನ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.