ರಾಜ್ಯದಲ್ಲೂ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಪರೀಕ್ಷೆ ರದ್ದುಪಡಿಸಲು ಆಗ್ರಹ

ಬಳ್ಳಾರಿ, ಜೂ.03: ಕೋವಿಡ್ ಎರಡನೇ ಅಲೆಯ ತೀವ್ರತೆಯ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ CBSE ಹತ್ತನೇ ಮತ್ತು ಹನ್ನೆರಡನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ನಮ್ಮ ರಾಜ್ಯ ಸರ್ಕಾರ ಇನ್ನೂ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳನ್ನು ಸಧ್ಯಕ್ಕೆ ಮುಂದೂಡಿದ್ದು, ಇನ್ನೂ ಪರೀಕ್ಷೆ ಕುರಿತು ನಿರ್ದಿಷ್ಟ ನಿರ್ಧಾರ ಕೈಗೊಂಡಿಲ್ಲ. CBSE ಪರೀಕ್ಷೆಗಳ ಮಾದರಿಯಲ್ಲಿಯೇ ರಾಜ್ಯ ಸರ್ಕಾರ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂದು AIDSO ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.
ಪರೀಕ್ಷೆಯ ಬಗೆಗಿನ ಗೊಂದಲ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಒತ್ತಡ ಹೇರುತ್ತದೆ. ಜೊತೆಗೆ, ಕೋವಿಡ್ ಸಾಂಕ್ರಾಮಿಕ ಇದೀಗ ಗ್ರಾಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆ ಸಹ ಹೆಚ್ಚುತ್ತಲೇ ಇದೆ. ಮುಂದಿನ ದಿನಗಳಲ್ಲಿ ಸರ್ಕಾರ ಪರೀಕ್ಷೆ ನಡೆಸಲು ನಿರ್ಧರಿಸಿದರೂ ಕೆಲವು ದಿನಗಳು ತರಗತಿ ನಡೆಸಿಯೇ ಪರೀಕ್ಷೆ ನಡೆಸಬೇಕು ಆದರೆ ಮುಂದೆ ಮೂರನೇ ಅಲೆಯ ಅಪಾಯ ಗಮನದಲ್ಲಿ ಇಟ್ಟುಕೊಂಡು, ತರಗತಿ ಅಥವಾ ಪರೀಕ್ಷೆ ನಡೆಸುವುದು ಕಷ್ಟಸಾಧ್ಯ ಆದ್ದರಿಂದ ಪರೀಕ್ಷೆಗಳನ್ನು ರದ್ದುಗೊಳಿಸಿ, ಅನುಭವಿ ಶಿಕ್ಷಕರು ಹಾಗೂ ಶಿಕ್ಷಣ ತಜ್ಞರ ಸಲಹೆ ಮೇರೆಗೆ ಒಂದು ವೈಜ್ಞಾನಿಕ ಮೌಲ್ಯಮಾಪನ ಪದ್ಧತಿ ರಚಿಸಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಪ್ರಥಮ ಪಿಯು ಮತ್ತು ಎಂಜಿನಿಯರಿಂಗ್ ಸೇರಿದಂತೆ ಇತರ ಉನ್ನತ ಶಿಕ್ಷಣದ ದಾಖಲಾತಿಯಲ್ಲಿ, ಪರೀಕ್ಷೆ ಬರೆಯದೇ ಇರುವ CBSE ವಿದ್ಯಾರ್ಥಿಗಳಿಗೆ ಹೆಚ್ಚುವರಿ ಲಾಭ ದೊರೆಯಲಿದೆ. ಇದು ರಾಜ್ಯದ ಪಠ್ಯಕ್ರಮದಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಸಂಕಷ್ಟ ಉಂಟುಮಾಡುತ್ತದೆ. ಸಿಇಟಿ ದಾಖಲಾತಿಯಲ್ಲಿ ಸಹ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅನಾನುಕೂಲ ಎದುರಾಗುತ್ತದೆ.
ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಆರೋಗ್ಯ ಮತ್ತು ವಿಧ್ಯಾಭ್ಯಾಸದ ಹಿತದೃಷ್ಟಿಯಿಂದ ಪರೀಕ್ಷೆ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ರಾಜ್ಯದ ಬಹುಪಾಲು ವಿದ್ಯಾರ್ಥಿಗಳು, ಪೋಷಕರ ಮತ್ತು ಶಿಕ್ಷಕರ ಅಭಿಪ್ರಾಯವಾಗಿದೆ ಮತ್ತು ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳಬೇಕು ಎಂದು AIDSO ಒತ್ತಾಯಿಸುತ್ತದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಗುರಳ್ಳಿರಾಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.