ರಾಜ್ಯದಲ್ಲಿ 4 ದಿನ ಮಳೆ

ಬೆಂಗಳೂರು, ಡಿ ೧- ವಾತಾವರಣದಲ್ಲಿ ಏರುಪೇರುನಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಡಿ ೫ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಳಿಗಾಲ ಆರಂಭವಾಗಿದ್ದರೂ ವಾತಾವರಣದಲ್ಲಿ ಏರುಪೇರು ಉಂಟಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಅಲ್ಲಲ್ಲಿ ತುಂತುರು ಮಳೆಯಾಗಲಿದೆ. ಮಳೆಯ ಪ್ರಮಾಣ ತಗ್ಗಿದ್ರೂ, ಇಬ್ಬನಿಯಂತೆ ದಿನನಿತ್ಯ ವರುಣನ ಸಿಂಚನ ಇದೆ. ನಿನ್ನೆಯೂ ಸಹ ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ವೇಳೆಗೆ ಚಾಮರಾಜಪೇಟೆ, ದೊಡ್ಡಬಸವನಗುಡಿ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಇಂದು ಸಹ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದೆ, ಮೈಸೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ತುಮಕೂರಿನ ಕೆಲವು ಭಾಗಗಳಲ್ಲಿ ಸಣ್ಣ ಪ್ರಮಾಣದ ಮಳೆ ಬೀಳುವ ಸಾಧ್ಯತೆಗಳಿವೆ. ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತಗೊಳ್ಳುವ ಸಾಧ್ಯತೆ ಇರುವುದರಿಂದ ರಾಜ್ಯದಲ್ಲಿ ಡಿ.೫ರವರೆಗೆ ಹಿಂಗಾರು ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಪ್ರಮಾಣ ತಗ್ಗಿದ್ರೆ ಮತ್ತೊಂದು ಕಡೆ ಚಳಿ ಹೆಚ್ಚಾಗುತ್ತಿದೆ. ಬೆಳಗಿನ ಜಾವ ಬೀಳುವ ಇಬ್ಬನಿಗೆ ಬಯಲು ಸೀಮೆ ಪ್ರದೇಶ ಮಲೆನಾಡು ಕಂಡಂತೆ ಬಾಸವಾಗುತ್ತಿದೆ. ಇದರ ಜೊತೆಗೆ ಮಳೆಯ ಸಿಂಚನ ಸಹ ಇರಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ರಾಮನಗರದಲ್ಲಿ ಮಳೆಯಾಗಲಿದೆ.