ರಾಜ್ಯದಲ್ಲಿ 3 ದಿನ ಮಳೆ


ಬೆಂಗಳೂರು, ನ ೨೧- ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ನವೆಂಬರ್ ೨೩ ರವರೆಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮಳೆ ಸುರಿಯಲಿದೆ. ಕೆಲವು ಕಡೆ ಗುಡುಗು-ಸಿಡಿಲು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಬೆಂಗಳೂರಿನ ಕೆಲವು ಭಾಗಗಳಲ್ಲಿ ಕೊಂಚ ಮಳೆಯ ಪ್ರಮಾಣ ಕೊಂಚ ಇಳಿಮುಖವಾಗುವ ಸಾಧ್ಯತೆಗಳಿವೆ.
ಬೆಂಗಳೂರಿನಲ್ಲಿ ಕನಿಷ್ಠ ೧೯, ಗರಿಷ್ಠ ೨೬ ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಇದೇ ರೀತಿ ಬುಧವಾರದವರೆಗೂ ಹವಾಮಾನ ಮುಂದುವರಿಯಲಿದೆ. ಗುರುವಾರ ಮತ್ತು ಶುಕ್ರವಾರ ಬೆಂಗಳೂರಿನಲ್ಲಿ ಒಣ ಹವೆ ಇರಲಿದೆ. ಮತ್ತೆ ಶನಿವಾರ ಮಳೆ ಮುಂದುವರಿಯಲಿದೆ.
ಕೋಲಾರ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಬಂಗಾರಪೇಟೆ ತಾಲೂಕಿನ ಬೂದಿಕೊಟೆ ಬಳಿಯಲ್ಲಿರುವ ೧೮ ವರ್ಷಗಳ ನಂತರ ಮಾರ್ಕೆಂಡೇಯ ಅಣೆಕಟ್ಟು ತುಂಬಿ ಹರಿಯುತ್ತಿದೆ. ೭೫೦ ಎಕರೆ ವಿಸ್ತೀರ್ಣ, ೮೦ ಅಡಿ ಆಳ ಹೊಂದಿರುವ ಜಲಾಶಯ ಇದಾಗಿದ್ದು, ಶನಿವಾರ ಸಂಜೆಯಿಂದ ಕೋಡಿ ಹರಿಯುತ್ತಿದೆ.
ಹುಬ್ಬಳ್ಳಿ, ಗದಗ, ಧಾರವಾಡ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಬಿಸಿಲುನಾಡು ಪ್ರದೇಶಗಳಾದ ರಾಯಚೂರು, ಬೀದರ್, ಬಳ್ಳಾರಿಯಲ್ಲಿಯೂ ಇವತ್ತು ಸಹ ಮೋಡ ಕವಿದ ವಾತಾವರಣ ಮುಂದುವರಿಯಲ್ಲಿದ್ದು, ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಲಿದೆ.
ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಳೆಯಾಗಲಿದೆ. ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ, ಕೊಡಗು, ಮಂಡ್ಯದಲ್ಲಿಯೂ ಮಳೆ ಮುಂದುವರಿಯಲಿದೆ.
ಕೊಡಗು ಜಿಲ್ಲೆಯಲ್ಲಿ ೨೦೧೮ ರಿಂದಲೂ ನಿರಂತರವಾಗಿ ನಾಲ್ಕು ವರ್ಷಗಳಿಂದಲೂ ಭಾರೀ ಮಳೆಗೆ ಪ್ರವಾಹ ಭೂಕುಸಿತ ಸಂಭವಿಸಿ ಜನರು ಭಾರೀ ನಷ್ಟ ಅನುಭವಿಸಿದ್ದರು. ಈ ಬಾರಿಯೂ ಮಳೆಗಾಲದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಪರಿಣಾಮ ರೈತರು ಕಷ್ಟಪಟ್ಟು ಬೆಳೆದಿದ್ದ ಕಾಫಿ, ಮೆಣಸು ಎಲ್ಲವೂ ಪ್ರವಾಹದ ಪಾಲಾಗಿದ್ದವು. ಈಗ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಕೈಗೆ ಬಂದ ಬೆಳೆ ಸಂಪೂರ್ಣ ನೆಲ ಕಚ್ಚಿದೆ.