ರಾಜ್ಯದಲ್ಲಿ 3 ದಿನ ಮಳೆ ಹಲವೆಡೆ ಯೆಲ್ಲೋ ಅಲರ್ಟ್

ಬೆಂಗಳೂರು, ನ ೧೫- ರಾಜ್ಯದಲ್ಲಿ ಇಂದಿನಿಂದ ಮೂರು ದಿನ ಸಿಡಿಲು, ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಇಂದು ಮತ್ತು ನವೆಂಬರ್ ೧೬ ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇಂದಿನಿಂದ ಮತ್ತೆ ಮೂರು ದಿನ ರಾಜ್ಯದ ಹಲವೆಡೆ ವ್ಯಾಪಕ ಮಳೆಯಾಗಲಿದೆ. ಎರಡು ದಿನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎರಡು ದಿನ ಆರೆಂಜ್ ಅಲರ್ಟ್ ಘೋಷನೆ ಮಾಡಿದೆ. ಎರಡು ದಿನಗಳ ಬಳಿಕ ಯೆಲ್ಲೋ ಅಲರ್ಟ್ ಆಗಲಿದೆ. ಇನ್ನುಳಿದಂತೆ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೈಸೂರು, ಚಾಮರಾಜನಗರ, ದಾವಣಗೆರೆ, ಪಶ್ಚಿಮಘಟ್ಟ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಹಾಕಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಸಹ ಮೋಡ ಕವಿದ ವಾತಾವರಣ ಇರಲಿದ್ದು, ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಮಳೆ ಜೊತೆ ಚಳಿ ಸಹ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇವತ್ತ ಗರಿಷ್ಠ ೨೬ ಡಿಗ್ರಿ ಸೆಲ್ಷಿಯಸ್ ಮತ್ತು ಕನಿಷ್ಠ ೧೯ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇದೇ ರೀತಿ ಬುಧವಾರದವರೆಗೆ ಮಳೆ ಮುಂದುವರಿಯಲಿದೆ.
ವಾಯುಭಾರ ಕುಸಿತದ ಪರಿಣಾಮ ಇನ್ನೂ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಇನ್ನು ಮೂರು ದಿನಗಳ ಕಾಲ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ಸಕ್ಕರೆ ನಾಡು ಮಂಡ್ಯದಲ್ಲಿ ವರುಣ ಆರ್ಭಟಿಸಿದ್ದಾನೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ನೂರಾರು ಎಕರೆ ಬೆಳೆ ಕೊಚ್ಚಿ ಹೋಗಿದೆ. ೧೫ಕ್ಕೂ ಹೆಚ್ಚು ಮನೆಗಳು ಕುಸಿದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕೆನ್ನಾಳು ಗ್ರಾಮದಲ್ಲಿ ಗೋಡೆ ಕುಸಿದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಂಡ್ಯ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆಯಾಗುತ್ತಿತ್ತು. ಆದರೆ ಕಳೆದ ರಾತ್ರಿ ವರುಣ ಆರ್ಭಟಿಸಿದ್ದು, ಜಿಲ್ಲೆಯ ಜನ ತತ್ತರಿಸಿದ್ದಾರೆ.