ರಾಜ್ಯದಲ್ಲಿ 15 ಸಾವಿರ ಮನೆಗಳ ಹಾನಿ: ಸಚಿವ ಅಶೋಕ್

ಕುಣಿಗಲ್, ಆ. ೫- ರಾಜ್ಯದಲ್ಲಿ ಪ್ರಕೃತಿ ವಿಕೋಪ, ಪ್ರವಾಹ ಮಳೆ ಹಾನಿಯಿಂದ ೧೫೦೦೦ ಮನೆಗಳಿಗೆ ಹಾನಿಯಾಗಿದ್ದು, ೯೦೦ ಮನೆಗಳು ಬಿದ್ದು ಹೋಗಿವೆ ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದರು
ತಾಲ್ಲೂಕಿನ ಎಡೆಯೂರು ಹೋಬಳಿ ನಾಗೇಗೌಡನ ಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದ ಮನೆ ಕಳೆದುಕೊಂಡ ಗಂಗಮ್ಮ ಎಂಬುವರಿಗೆ ೯೦ ಸಾವಿರ ರೂಪಾಯಿ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ದೀನ ದಲಿತರು, ಬಡವರು, ರೈತರ ಪರವಾಗಿ ಕೆಲಸ ಮಾಡುತ್ತಿದೆ. ಸತತ ಸುರಿದ ಮಳೆಯಿಂದಾಗಿ ಮನೆಗಳ ಹಾನಿಯುಂಟಾಗಿದ್ದು, ನೊಂದವರಿಗೆ ಈಗಾಗಲೇ ಪರಿಹಾರ ಕಾರ್ಯ ಚುರುಕುಗೊಂಡಿದೆ. ಬೆಳೆ ಹಾನಿಗೆ ಪರಿಹಾರ ನೀಡುವ ಜತೆಯಲ್ಲಿ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ೮೦೦ ಕೋಟಿಗೂ ಹೆಚ್ಚು ಹಣ ಇದೆ. ಇನ್ನು ಹೆಚ್ಚುವರಿಯಾಗಿ ೫೦೦ ಕೋಟಿ ಹಣ ಬಿಡುಗಡೆ ಮಾಡುತ್ತೇನೆ ಎಂದು ಅವರು ಹೇಳಿದರು.
ಬಡವರಿಗೆ ಸಿಗಬೇಕಾದ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಸಚಿವ ಅಶೋಕ್ ಸೂಚಿಸಿದರು.
ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ಬಗ್ಗೆ ಏನೇ ಟೀಕೆ ಮಾಡಲಿ ಅದನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವರೆಲ್ಲರೂ ಹುಟ್ಟುಹಬ್ಬ ಆಚರಣೆಯಲ್ಲಿದ್ದರೆ ನಾವು ರಾಜ್ಯದ ಪ್ರವಾಹ ಪೀಡಿತ ಅನಾಹುತ ನಡೆದ ಕಡೆ, ಜನರ ಮಧ್ಯೆ ಕೆಲಸ ಮಾಡುತ್ತಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ ಬಗ್ಗೆ ಟೀಕಿಸಿದರು.
ಈ ಸಂದರ್ಭದಲ್ಲಿ ಅಬಕಾರಿ ಸಚಿವ ಗೋಪಾಲಯ್ಯ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್. ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮಹಾಬಲೇಶ್ವರ ಮತ್ತಿತರರು ಉಪಸ್ಥಿತರಿದ್ದರು.