ರಾಜ್ಯದಲ್ಲಿ ೫.೩೭ ಕೋಟಿ ಮತದಾರರು

ಆಯೋಗದಿಂದ ಅಂಕಿಅಂಶ ಬಿಡುಗಡೆ

ಬೆಂಗಳೂರು, ಜ. ೨೨- ಕರ್ನಾಟಕ ರಾಜ್ಯದ ಅಂತಿಮ ಮತದಾರರ ಪಟ್ಟಿ-೨೦೨೪ ಬಿಡುಗಡೆಯಾಗಿದ್ದು, ೧೭,೯೩೭ ಶತಯುಷಿಗಳು(ನೂರು ವರ್ಷ ತುಂಬಿರುವ) ಸೇರಿದಂತೆ ಬರೋಬ್ಬರಿ ೫.೩೭ ಕೋಟಿ ಮತದಾರರು ಇದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿ ಬಿಡುಗಡೆ ಮಾಡಿದೆ.
ನಗರದಲ್ಲಿಂದು ಶೇಷಾದ್ರಿ ರಸ್ತೆಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಂತಿಮ ಮತದಾರರ ಪಟ್ಟಿ ಬಿಡುಗಡೆಗೊಳಿಸಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಕರಡು ಮತದಾರರ ಪಟ್ಟಿ -೨೦೨೪ ರ ಪ್ರಕಾರ, ಒಟ್ಟು ಸಾಮಾನ್ಯ ಮತದಾರರ ಸಂಖ್ಯೆ ೫,೩೩,೭೭,೧೬೨ ಆಗಿದ್ದು, ಇದರಲ್ಲಿ ೨,೬೮,೦೨,೮೩೮ ಪುರುಷ ಮತದಾರರು, ೨,೬೫,೬೯,೪೨೮ ಮಹಿಳಾ ಮತದಾರರು ಮತ್ತು ೪,೮೯೬ ಇತರೆ ಮತದಾರರು ಸೇರಿದ್ದಾರೆ.
ಆದರೆ, ಅಂತಿಮ ಮತದಾರರ ಪಟ್ಟಿ-೨೦೨೪ ರಲ್ಲಿ, ಒಟ್ಟು ಸಾಮಾನ್ಯ ಮತದಾರರ ಸಂಖ್ಯೆ ೫,೩೭,೮೫,೮೧೫ ಹೆಚ್ಚಳವಾಗಿದ್ದು, ಇದರಲ್ಲಿ ೨,೬೯,೩೩,೭೫೦ ಪುರುಷ ಮತದಾರರು, ೨,೬೮,೪೭,೧೪೫ ಮಹಿಳಾ ಮತದಾರರು ಮತ್ತು ೪,೯೨೦ ಇತರೆ ಮತದಾರರು ಸೇರಿದ್ದಾರೆ ಎಂದು ಅವರು ವಿವರಿಸಿದರು.
ಕರಡು ಪಟ್ಟಿಗೆ ಹೋಲಿಸಿದರೆ ಒಟ್ಟು ಮತದಾರರಲ್ಲಿ ಸಂಖ್ಯೆ ೪,೦೮,೬೫೩ ಹೆಚ್ಚಳವಾಗಿದೆ. ಈ ಪೈಕಿ ಮಹಿಳಾ ಮತದಾರರ ಸಂಖ್ಯೆ ಗಮನಾರ್ಹವಾಗಿ ೨,೭೭,೭೧೭ ರಷ್ಟು ಮತದಾರರು ಸಂಖ್ಯೆ ಹೆಚ್ಚಳವಾಗಿದ್ದು, ಪುರುಷ ಮತದಾರರಲ್ಲಿ ೧,೩೦,೯೧೨ ಮತ್ತು ಇತರೆ ಮತದಾರರಲ್ಲಿ ೨೪ ಮತದಾರರ ಸಂಖ್ಯೆ ಹೆಚ್ಚಳವಾಗಿದೆ ಎಂದರು.
೨೨೪ ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು ಅಂದರೆ ೭,೧೭,೨೦೧ ಮತದಾರರನ್ನು ಹೊಂದಿದೆ. ವ್ಯತಿರಿಕ್ತವಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ೧,೬೭,೫೫೬ ಮತದಾರರಿದ್ದಾರೆ ಎಂದು ಅವರು ಉಲ್ಲೇಖಿಸಿದರು.
ಭಾವಚಿತ್ರ ಅಳವಡಿಕೆ ಹಾಗೂ ಮತದಾರರ ಗುರುತಿನ ಚೀಟಿಗಳ ಹಂಚಿಕೆಯನ್ನು ಶೇಕಡಾ ನೂರಕ್ಕೆ ನೂರರಷ್ಟು ಸಾಧಿಸಲಾಗಿದೆ. ಮತದಾರರ ಗುರುತಿನ ಚೀಟಿಗಳನ್ನು ಮತದಾರರಿಗೆ ತ್ವರಿತ ಅಂಚೆ ಸೇವೆಯ ಮೂಲಕ ಆಯಾ ವಿಳಾಸಗಳಿಗೆ ರವಾನಿಸಲಾಗುತ್ತಿದೆ.
ಅದೇ ರೀತಿ, ನವೆಂಬರ್ ಅಂತ್ಯದ ವೇಳೆಗೆ ೧೭,೪೭,೫೧೮ ಮತದಾರರ ಗುರುತಿನ ಚೀಟಿಗಳನ್ನು ಯಶಸ್ವಿಯಾಗಿ ತ್ವರಿತ ಅಂಚೆ ಮೂಲಕ ನೇರವಾಗಿ ಮತದಾರರಿಗೆ ತಲುಪಿಸಲಾಗಿದೆ. ಹೆಚ್ಚುವರಿಯಾಗಿ, ಇನ್ನೂ ೧೦,೭೬,೫೦೬ ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸಿದ್ದು, ಪ್ರಸ್ತುತ ಮತದಾರರಿಗೆ ರವಾನಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ ಎಂದು ಅವರು ಹೇಳಿದರು.ಮತದಾನ ಕೇಂದ್ರಗಳು:ಅಂತಿಮ ಮತದಾರರ ಪಟ್ಟಿ -೨೦೨೪ ರ ಪ್ರಕಾರ ಒಟ್ಟು ಮತಗಟ್ಟೆಗಳ ಸಂಖ್ಯೆ ೫೮,೮೩೪ ಆಗಿದೆ. ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಸಮಯದಲ್ಲಿ ೮೪೫ ಮತಗಟ್ಟೆಗಳನ್ನು ಸೇರ್ಪಡೆಗೊಳಿಸಿದ್ದು, ೨೯೩ ಮತಗಟ್ಟೆಗಳನ್ನು ವಿಲೀನಗೊಳಿಸಲಾಗಿದೆ. ಅದರಂತೆ ೫೫೨ ಮತಗಟ್ಟೆಗಳ ನಿವ್ವಳ ಹೆಚ್ಚಳವಾಗಿದೆ.
ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ, ಅವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ತಕ್ಷಣವೇ ನೋಂದಾಯಿಸಲು ಪ್ರೋತ್ಸಾಹಿಸಲಾಗುತ್ತದೆ. ಮತದಾನದ ದಿನದಂದು ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ.
ಆದ್ದರಿಂದ, ಮತದಾರರು ವಿಳಂಬವಿಲ್ಲದೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಲು ಮತ್ತು ದೃಢೀಕರಿಸಲು ಸೂಚಿಸಲಾಗಿದೆ. ಅರ್ಹ ಮತದಾರರು ಅರ್ಜಿಗಳನ್ನು ಸಲ್ಲಿಸಲು ತಮ್ಮ ಮೊಬೈಲ್ ನಲ್ಲಿ ವೋಟರ್ ಹೆಲ್ಪಲೈನ್ ಅಪ್ಲಿಕೇಶನ್ ಆಯ್ಕೆಯನ್ನು ಹೊಂದಿದ್ದಾರೆ. ಪರ್ಯಾಯವಾಗಿ, hಣಣಠಿs://voಣeಡಿಠಿoಡಿಣಚಿಟ.eಛಿi.gov.iಟಿ/ ಪೋರ್ಟಲ್ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಮನೋಜ್ ಕುಮಾರ್ ಮೀನಾ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿಗಳಾದ
ವೆಂಕಟೇಶ್ ಕುಮಾರ್, ಕುರ್ಮಾರಾವ್ ಸೇರಿದಂತೆ ಪ್ರಮುಖರಿದ್ದರು.

 • ಒಟ್ಟು ಮತದಾರರು-೫,೩೭,೮೫,೮೧೫
 • ಪುರುಷರು-೨,೬೯,೩೩,೭೫೦
 • ಮಹಿಳೆಯರು- ೨,೬೮,೪೭,೧೪೫
 • ಇತರೆ-೪,೯೨೦
 • ಸೇವಾ ಮತದಾರರು-೪೬,೫೦೧
 • ಯುವ ಮತದಾರರು-೩,೮೮,೫೨೭
 • ವಿದೇಶದಲ್ಲಿರುವ ಮತದಾರರು-೩,೧೬೪
 • ೮೦ ವರ್ಷ ದಾಟಿರುವ ಮತದಾರರು-೧೨,೭೧,೮೬೨
 • ಶತಯುಷಿ(ನೂರು ವರ್ಷ ತುಂಬಿರುವ)ಮತದಾರರು-೧೭,೯೩೭
 • ವಿಕಲಚೇತನ ಮತದಾರರು-೫,೬೨,೮೯೦
 • ಮತದಾನ ಕೇಂದ್ರಗಳು-೫೮,೮೩೪

 • ಒಟ್ಟು ಸೇರ್ಪಟೆ-೩೫,೦೨,೩೨೮
 • ತೆಗೆದುಹಾಕುವಿಕೆ- ೧೧,೧೪,೨೫೭
 • ಮಾರ್ಪಾಡು-೧೩,೪೩,೧೨೩