ರಾಜ್ಯದಲ್ಲಿ ೧೮೮ ಹೊಸ ಇಂದಿರಾ ಕ್ಯಾಂಟಿನ್

ಮಂಗಳೂರು, ಸೆ.೭- ಬಿಬಿಎಂಪಿ ಹೊರತುಪಡಿಸಿ ರಾಜ್ಯದಲ್ಲಿ ೧೮೮ ಹೊಸ ಇಂದಿರಾ ಕ್ಯಾಂಟಿನ್ ಆರಂಭಿಸಲಾಗುವುದು. ಹಾಗೂ ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್‌ಗಳಿಗೆ ಹೊಸ ಜಾಗ ಮತ್ತು ನಿರ್ದಿಷ್ಟ ಫುಡ್ ಮೆನುವನ್ನು ಪ್ರಸ್ತಾಪಿಸಲಾಗಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.
ಮಂಗಳೂರಿನ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಸಚಿವ ರಹೀಂ ಖಾನ್, ಸರ್ಕಾರದ ನಿರ್ಧಾರದಂತೆ ಇಂದಿರಾ ಕ್ಯಾಂಟಿನ್‌ಗಳಲ್ಲಿ ಹೊಸ ಮೆನುಗಾಗಿ ಹೊಸ ಟೆಂಡರ್‌ಗಳನ್ನು ನೀಡಲಾಗುವುದು ಎಂದು ಪ್ರಸ್ತಾಪಿಸಿದರು. ಪ್ರಸ್ತುತ, ಬಿಬಿಎಂಪಿ ಹೊರತುಪಡಿಸಿ ರಾಜ್ಯದಲ್ಲಿ ೧೯೭ ಇಂದಿರಾ ಕ್ಯಾಂಟಿನ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ, ೧೮೮ ಹೊಸ ಇಂದಿರಾ ಕ್ಯಾಂಟಿನ್‌ಗಳನ್ನು ಆರಂಭಿಸಲಾಗುವುದು ಎಂದರು.
ಬಜ್ಪೆ, ಬೆಳ್ತಂಗಡಿ, ಕಿನ್ನಿಗೋಳಿ, ಮೂಡುಬಿದಿರೆ, ಕಡಬ, ಮುಲ್ಕಿ, ಕೋಟೆಕಾರ್, ವಿಟ್ಲ, ಮತ್ತು ಸೋಮೇಶ್ವರದಲ್ಲಿ ಹೊಸ ಇಂದಿರಾ ಕ್ಯಾಂಟಿನ್‌ಗಳನ್ನು ಆರಂಭಿಸಲಾಗುವುದು. ಜನರಿಗೆ ಹೆಚ್ಚು ಅನುವಾಗುವ ಸ್ಥಳದಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.