ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೆಣ್ಣುಮಕ್ಕಳ ಸರಣಿ ಕೊಲೆಗಳು – ಸೂಕ್ತ ಕ್ರಮಕ್ಕೆ ಎಐಎಂಎಸ್ಎಸ್ ಆಗ್ರಹ


ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.23: ಇಂದು ಎ ಐ ಎಂ ಎಸ್ ಎಸ್ ಮಹಿಳಾ ಸಂಘಟನೆ ವತಿಯಿಂದ ‘ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೆಣ್ಣುಮಕ್ಕಳ ಸರಣಿ ಕೊಲೆಗಳ’ ಕುರಿತು ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎ ಐ ಎಂ ಎಸ್ ಎಸ್ ನ ಜಿಲ್ಲಾ ಅಧ್ಯಕ್ಷರಾದ ಈಶ್ವರಿ ಕೆ.ಎಂ. ಅವರು ಮಾತನಾಡುತ್ತಾ “ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಇಡೀ ನಾಡಿನ ಜನತೆಯನ್ನು ಬೆಚ್ಚಿ ಬೀಳಿಸಿದೆ. ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಆರೋಪಿ ಆಕೆಯನ್ನು ಒಂಬತ್ತು ಬಾರಿ ಇರಿದು ಕೊಂದ. ಇತ್ತೀಚೆಗೆ ಇಂತಹ ಘಟನೆಗಳು ರಾಜ್ಯದಲ್ಲಿ ಸಾಲು ಸಾಲಾಗಿ ನಡೆಯುತ್ತಿವೆ. ಮೈಸೂರಿನ ರುಕ್ಸಾನಾ, ಕನಕಪುರದ ನವ್ಯಾ, ದಕ್ಷಿಣ ಕನ್ನಡ ಜಿಲ್ಲೆಯ ಅಕ್ಷತಾ, ಬೆಂಗಳೂರಿನ ಲಯಸ್ಮಿತಾ, ಉಡುಪಿಯ ಐನಾಜ್ ಮತ್ತು ಆಕೆಯ ಕುಟುಂಬ…. ಇತ್ತೀಚೆಗೆ ಬರ್ಬರವಾಗಿ ಕೊಲೆಯಾದವರು. ಹೀಗೆ ಈ ಪಟ್ಟಿ ಇನ್ನು ದೊಡ್ಡದಾಗುತ್ತಾ ಹೋಗುತ್ತದೆ. ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಅಥವಾ ತಾನು ಪ್ರೀತಿಸಿದ ಹುಡುಗಿ ಬೇರೆಯವರ ಜೊತೆ ಬೆರೆಯಬಾರದು ಎಂಬ ಹಲವಾರು ಕಾರಣಗಳಿಂದ ಕೊಲೆ ಮಾಡುವುದು ಅಥವಾ ಕೊಲೆ ಮಾಡಿ ಸುಟ್ಟು ಹಾಕುವುದು ಅಥವಾ ಆಸಿಡ್ ಎರಚುವುದು ಹೀಗೆ ನಾನಾ ರೀತಿಯಲ್ಲಿ ಹೆಣ್ಣು ಮಕ್ಕಳನ್ನು ಬಲಿ ತೆಗೆದುಕೊಳ್ಳಲಾಗುತ್ತಿದೆ.
ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಏಳು ವರ್ಷದ ಬಾಲಕಿಯನ್ನು ಅಪಹರಿಸಿ, ಹತ್ಯೆಗೈದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಇಡಲಾಗಿದೆ. ನಿಧಿಯ ಆಸೆಗಾಗಿ ಈ ಕೊಲೆ ನಡೆದಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಂತಹ ಮೌಢ್ಯತೆಗಳು ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಾಗಿವೆ.ಕಾರಣ ಏನೇ ಇದ್ದರೂ ಇಲ್ಲಿ ಬಲಿಯಾಗುತ್ತಿರುವುದು ಹೆಣ್ಣು ಮಕ್ಕಳೇ.
ಇಂದಿನ ಯುವಕರಲ್ಲಿ ಹಿಂಸೆಯ ಪ್ರವೃತ್ತಿ ಹೆಚ್ಚುತ್ತಿರುವುದು ತುಂಬಾ ನೋವಿನ ವಿಷಯ. ಸಾಂಸ್ಕೃತಿಕ ಅಧಃಪತನದಿಂದಾಗಿ ಇಂದಿನ ಸಿನಿಮಾ- ಸಾಹಿತ್ಯ, ರಿಲ್ಸ್, ಶಾರ್ಟ್ಸ್ ಗಳಲ್ಲಿ ಹಿಂಸೆ, ಕ್ರೌರ್ಯವನ್ನು ವಿಜೃಂಭಿಸಲಾಗುತ್ತಿದೆ. ಇದಕ್ಕೆ ಬಲಿಯಾಗುತ್ತಿರುವುದು ಇಂದಿನ ಯುವಕರೇ. ಇದರ ಪರಿಣಾಮವನ್ನು ಹೆಣ್ಣುಮಕ್ಕಳು ಅನುಭವಿಸುತ್ತಿದ್ದಾರೆ. ಜೊತೆಗೆ ಇಂತಹ ಘಟನೆಗಳು ನಡೆದಾಗ ತೀವ್ರಗತಿಯಲ್ಲಿ ತನಿಖೆ ನಡೆಸಿ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ನೀಡುವಲ್ಲಿ ನಮ್ಮ ಕಾನೂನು ವ್ಯವಸ್ಥೆ ವಿಫಲವಾಗಿರುವುದು ಇಂತಹ ಘಟನೆಗಳು ಮರುಕಳಿಸಲು ಕಾರಣವಾಗುತ್ತಿದೆ. ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ.
ಪ್ರಜಾತಾಂತ್ರಿಕ ಮೌಲ್ಯಗಳು ಸಂಪೂರ್ಣವಾಗಿ ನೆಲೆಗೊಳ್ಳದ ನಮ್ಮ ಸಮಾಜದಲ್ಲಿ ಇಂದು ಮಾನವೀಯ ಮೌಲ್ಯಗಳು ಕೂಡ ಕಳೆದು ಹೋಗುತ್ತಿವೆ. ಈಶ್ವರ್ ಚಂದ್ರ ವಿದ್ಯಾಸಾಗರ್, ಸಾವಿತ್ರಿಬಾಯಿ ಫುಲೆ, ಭಗತ್ ಸಿಂಗ್, ನೇತಾಜಿ, ಪ್ರೀತಿಲತಾ ರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳು ಇಂದಿನ ವಿದ್ಯಾರ್ಥಿ- ಯುವಕರಿಗೆ ತಲುಪುತ್ತಿಲ್ಲ. ಇದು ಅವರ ಸರ್ವತೋಮುಖ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಸಮಾಜದಲ್ಲಿ ಉನ್ನತ ನೀತಿ, ನೈತಿಕತೆ ಬೆಳೆಸಲು ಪ್ರಜಾತಾಂತ್ರಿಕ ಮೌಲ್ಯಗಳನ್ನು ಸ್ಥಾಪಿಸಲು ಜರೂರಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು ಜೊತೆಗೆ ಇಂತಹ ಹೀನ ಕೃತ್ಯಗಳು ನಡೆದಾಗ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಅಹಲ್ಯಾ, ಗಿರಿಜಾ, ವಿಜಯಲಕ್ಷ್ಮಿ, ವಿದ್ಯಾ ಉಪಸ್ಥಿತರಿದ್ದರು.