ರಾಜ್ಯದಲ್ಲಿ ಸೋಂಕು ಹೆಚ್ಚಳ: 2 ತಿಂಗಳು ಎಚ್ಚರ ಅಗತ್ಯ: ಸುಧಾಕರ್

ಬೆಂಗಳೂರು, ಮಾ.25- ರಾಜ್ಯದಲ್ಲಿ ಕೋರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಾರ್ವಜನಿಕರು ಮುಂದಿನ 2 ತಿಂಗಳು ಬಹಳ ಎಚ್ಚರಿಕೆಯಿಂದಿರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಸೋಂಕಿನ ಪ್ರಕರಣಗಳು ಹೆಚ್ಚಾಗಬಾರದು. ಒಂದು ಪ್ರಕರಣ ಕಂಡುಬಂದರೆ 20 ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಲವರಲ್ಲಿ ಹೊಸ ವೈರಾಣು ಕಾಣಿಸಿಕೊಂಡಿದ್ದು, ಅಂತಹ ಸುಮಾರು 700 ಪ್ರಕರಣ ಪತ್ತೆಯಾಗಿದೆ. ತಜ್ಞರ ಪ್ರಕಾರ ಇದು ಬಹಳ ಬೇಗ ಹರಡುತ್ತದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳಾಗುತ್ತಿವೆ ಎಂದು ತಿಳಿಸಿದ್ದಾರೆ.

ಲಸಿಕೆಗೆ ಸೂಚನೆ:

45 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕೆಂದು ಆದೇಶವಾಗಿದೆ. ದೇಶದಲ್ಲಿ ಬದಲಾದ ತಳಿಯ ಪರೀಕ್ಷೆ ಮಾಡಲಾಗಿದೆ ಎಂದರು.

ಚುನಾವಣೆ ಎಂದಾಕ್ಷಣ ಕೊರೊನಾ ಬರದೇ ಇರುವುದಿಲ್ಲ. ಜನರು ಗುಂಪುಗೂಡುವುದನ್ನು ಕಡಿಮೆ ಮಾಡುವುದೇ ನಮಗೆ ಮುಖ್ಯ. ಹೀಗಾಗಿ ಚುನಾವಣಾಧಿಕಾರಿಗಳನ್ನು ಭೇಟಿ ನೀಡಿ ಈ ಕುರಿತು ಚರ್ಚಿಸಲಾಗುವುದು ಎಂದರು.

ಕೊರೋನಾ ಸೋಂಕು ಹೆಚ್ಚಳ‌ ಹಿನ್ನೆಲೆಯಲ್ಲಿ ಚಿತ್ರರಂಗದ ಕಲಾವಿದರಿಗೂ ಮನವಿ ಮಾಡಲಾಗಿದೆ. ನಾಯಕ ನಟರು ಕೂಡ ಸಾಮಾಜಿಕ ಕಳಕಳಿ ಹೊಂದಿದ್ದು, ಅವರು ಕೂಡ ಈ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.